ʼಗುಜರಾತ್ ನಲ್ಲಿ ಅನಾಮಧೇಯ ಪಕ್ಷಗಳಿಗೆ ಭಾರಿ ದೇಣಿಗೆʼ: ಚುನಾವಣಾ ಆಯೋಗ ತನಿಖೆ ನಡೆಸುವುದೇ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ: 2019-20 ಹಾಗೂ 2023-24ರ ನಡುವೆ ಗುಜರಾತ್ ನಲ್ಲಿ ಅನಾಮಧೇಯ ಪಕ್ಷಗಳು 4,300 ಕೋಟಿ ರೂ. ದೇಣಿಗೆ ಸ್ವೀಕರಿಸಿವೆ ಎಂಬ ಮಾಧ್ಯಮವೊಂದರ ವರದಿಯನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ಆಯೋಗ ಈ ಕುರಿತು ತನಿಖೆ ನಡೆಸುತ್ತಾ ಅಥವಾ ಅಫಿಡವಿಟ್ ಸಲ್ಲಿಸುವಂತೆ ಕೇಳುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ, ಈ ಕುರಿತು ಚುನಾವಣಾ ಆಯೋಗ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಕುರಿತು ಎಕ್ಸ್ ನಲ್ಲಿ ಮಾಧ್ಯಮ ವರದಿಯೊಂದನ್ನು ಪೋಸ್ಟ್ ಮಾಡಿರುವ ಲೋಕಸಭಾ ವಿಪಕ್ಷ ನಾಯಕರೂ ಆದ ರಾಹುಲ್ ಗಾಂಧಿ, “ಗುಜರಾತ್ ನಲ್ಲಿ ಅನಾಮಧೇಯವಾಗಿ ನೋಂದಣಿಯಾಗಿರುವ 10 ರಾಜಕೀಯ ಪಕ್ಷಗಳು 2019-20 ಹಾಗೂ 2023-24ರ ನಡುವೆ 4,300 ಕೋಟಿ ರೂ. ದೇಣಿಗೆಯನ್ನು ಸ್ವೀಕರಿಸಿವೆ. ಈ ಅವಧಿಯಲ್ಲಿ 2019 ಹಾಗೂ 2024ರ ಲೋಕಸಭಾ ಚುನಾವಣೆ ಹಾಗೂ 2022ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆದಿತ್ತು. ಈ ಚುನಾವಣೆಗಳಲ್ಲಿ ಈ ಪಕ್ಷಗಳು ಕೇವಲ 43 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು ಹಾಗೂ ಕೇವಲ 54,069 ಮತಗಳನ್ನು ಪಡೆದಿದ್ದವು ಎಂಬ ವರದಿಯನ್ನು ಉಲ್ಲೇಖಿಸಿದ್ದಾರೆ.
ಚುನಾವಣಾ ವರದಿಗಳ ಪ್ರಕಾರ, ಈ ಸ್ಪರ್ಧೆಗಾಗಿ ಕೇವಲ 39.02 ಲಕ್ಷ ರೂ. ಮಾತ್ರ ವೆಚ್ಚವಾಗಿದ್ದರೆ, ಲೆಕ್ಕ ಪರಿಶೋಧನಾ ವರದಿಗಳ ಪ್ರಕಾರ, 3,500 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ಗುಜರಾತ್ ನಲ್ಲಿ ಕೆಲವು ಅನಾಮಧೇಯ ಪಕ್ಷಗಳಿದ್ದು, ಅವುಗಳ ಹೆಸರನ್ನು ಯಾರೂ ಕೇಳಿರದಿದ್ದರೂ, 4,300 ಕೋಟಿ ರೂ. ದೇಣಿಗೆಯನ್ನಾಗಿ ಸ್ವೀಕರಿಸಿವೆ” ಎಂದು ರಾಹುಲ್ ಗಾಂಧಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಪಕ್ಷಗಳು ಚುನಾವಣೆಗಳಲ್ಲಿ ಸ್ಪರ್ಧಿಸಿವೆ ಅಥವಾ ಚುನಾವಣೆಗಾಗಿ ಮಾತ್ರ ವೆಚ್ಚ ಮಾಡಿವೆ ಎಂದೂ ಅವರು ಹೇಳಿದ್ದಾರೆ.
“ಈ ಸಾವಿರಾರು ಕೋಟಿ ರೂ. ಎಲ್ಲಿಂದ ಬರುತ್ತಿದೆ? ಇದನ್ನೆಲ್ಲ ಯಾರು ನಡೆಸುತ್ತಿದ್ದಾರೆ? ಹಾಗೂ ಈ ಹಣ ಎಲ್ಲಿಗೆ ಹೋಗುತ್ತಿದೆ? ಚುನಾವಣಾ ಆಯೋಗವೇನಾದರೂ ಈ ಕುರಿತು ತನಿಖೆ ನಡೆಸಲಿದೆಯೆ ಅಥವಾ ಅದಕ್ಕೂ ಪ್ರಮಾಣ ಪತ್ರ ಕೇಳಲಿದೆಯೆ? ಅಥವಾ ಈ ದತ್ತಾಂಶವನ್ನೂ ಬಚ್ಚಿಡುವಂತೆ ಅದೇನಾದರೂ ಕಾನೂನನ್ನೇ ಬದಲಿಸಲಿದೆಯೆ?” ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಮತಪಟ್ಟಿಯಲ್ಲಿ ಅಕ್ರಮ ನಡೆದಿದೆಯೆಂದು ರಾಹುಲ್ ಗಾಂಧಿ ಆರೋಪಿಸಿದ ನಂತರ, ಆಗಸ್ಟ್ 17ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಭಾರತೀಯ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್, ರಾಹುಲ್ ಗಾಂಧಿ ಈ ಅಕ್ರಮಗಳ ಪುರಾವೆಗಳೊಂದಿಗೆ ಪ್ರಮಾಣ ಪತ್ರ ಸಲ್ಲಿಸಬೇಕು ಇಲ್ಲವೆ ದೇಶದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು.
गुजरात में कुछ ऐसी अनाम पार्टियां हैं जिनका नाम किसी ने नहीं सुना - लेकिन 4300 करोड़ का चंदा मिला!
— Rahul Gandhi (@RahulGandhi) August 27, 2025
इन पार्टियों ने बहुत ही कम मौकों पर चुनाव लड़ा है, या उनपर खर्च किया है।
ये हजारों करोड़ आए कहां से? चला कौन रहा है इन्हें? और पैसा गया कहां?
क्या चुनाव आयोग जांच करेगा - या फिर… pic.twitter.com/CuP9elwPaY







