ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯ ವಿರೋಧಿ : ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ | PTI
ಹೊಸದಿಲ್ಲಿ : ನಾನು ಏಕಸ್ವಾಮ್ಯ ವಿರೋಧಿಯಾಗಿದ್ದೇನೆ, ಉದ್ಯಮ ವಿರೋಧಿಯಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ.
ಬುಧವಾರ ‘ದಿ ಇಂಡಿಯನ್ ಎಕ್ಸ್ಪ್ರೆಸ್’ನಲ್ಲಿ ‘ನ್ಯೂ ಡೀಲ್ ಫಾರ್ ಇಂಡಿಯನ್ ಬಿಸಿನೆಸ್’ ಶೀರ್ಷಿಕೆಯಡಿ ತಾವು ಬರೆದಿದ್ದ ಸಂಪಾದಕೀಯಕ್ಕೆ ಟೀಕೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರಾಹುಲ್, ‘ಬಿಜೆಪಿಯಲ್ಲಿನ ನನ್ನ ವಿರೋಧಿಗಳನ್ನು ನನ್ನನ್ನು ಉದ್ಯಮ ವಿರೋಧಿ ಎಂದು ಬಿಂಬಿಸಿದ್ದಾರೆ. ನಾನು ಕೆಲವೇ ಜನರಿಂದ ಮಾರುಕಟ್ಟೆಯ ನಿಯಂತ್ರಣಕ್ಕೆ ವಿರೋಧಿಯಾಗಿದ್ದೇನೆ. ನಾನು ಬೆರಳೆಣಿಕೆಯ ಜನರು ಉದ್ಯಮದ ಮೇಲೆ ಹಿಡಿತ ಹೊಂದಿರುವುದರ ವಿರೋಧಿಯಾಗಿದ್ದೇನೆ’ ಎಂದು ಹೇಳಿದ್ದಾರೆ.
ಎಲ್ಲ ಉದ್ಯಮಗಳಿಗೆ ಮುಕ್ತ ಮತ್ತು ನ್ಯಾಯಯುತ ಅವಕಾಶವಿದ್ದರೆ ಆರ್ಥಿಕತೆಯು ಬೆಳೆಯುತ್ತದೆ ಎಂದು ಹೇಳಿದ ಅವರು, ನಾನು ಉದ್ಯೋಗಗಳ ಪರ, ಉದ್ಯಮಗಳ ಪರ, ನವೀನತೆಯ ಪರ ಮತ್ತು ಸ್ಪರ್ಧೆಯ ಪರವಾಗಿದ್ದೇನೆ ಎಂದಿದ್ದಾರೆ.
ಬುಧವಾರ ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿಯ ಸಂಪಾದಕೀಯದಲ್ಲಿ ಏಕಸ್ವಾಮ್ಯವಾದಿಗಳ ನೂತನ ತಳಿಯು ದೇಶದ ಆಡಳಿತ ಸಂಸ್ಥೆಗಳನ್ನು ನಿಯಂತ್ರಿಸುತ್ತಿದೆ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಆರೋಪಿಸಿದ್ದರು.
ಈ ‘ಅಲ್ಪಾಧಿಪತ್ಯದ ಗುಂಪು’ಗಳಿಂದಾಗಿ ಲಕ್ಷಾಂತರ ಉದ್ಯಮಗಳು ನಾಶಗೊಂಡಿವೆ ಮತ್ತು ಉದ್ಯೋಗ ಸೃಷ್ಟಿ ಕಠಿಣವಾಗಿದೆ. ಹೆಚ್ಚುತ್ತಿರುವ ಅಸಮಾನತೆಯ ನಡುವೆ ಈ ‘ಮ್ಯಾಚ್-ಫಿಕ್ಸಿಂಗ್’ ಏಕಸ್ವಾಮ್ಯವಾದಿ ಗುಂಪುಗಳು ಅಪಾರ ಸಂಪತ್ತನ್ನು ಕೂಡಿಹಾಕಿವೆ. ಸರಕಾರವು ಇತರರನ್ನು ಬಲಿಗೊಟ್ಟು ಒಂದು ಉದ್ಯಮವನ್ನು ಬೆಂಬಲಿಸುವುದಕ್ಕೆ ಅವಕಾಶ ನೀಡುವಂತಿಲ್ಲ ಎಂದು ಹೇಳಿದ್ದರು. ಆದರೆ, ಮ್ಯಾಚ್-ಫಿಕ್ಸಿಂಗ್ ಏಕಸ್ವಾಮ್ಯ ಗುಂಪುಗಳಿಗೆ ಹೋಲಿಸಿದರೆ ನಿಯಮಗಳ ಪ್ರಕಾರ ಕಾರ್ಯಾಚರಿಸುತ್ತಿರುವ ದೇಶಿಯ ಕಂಪನಿಗಳ ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ಬೆಟ್ಟು ಮಾಡಿದ್ದ ಅವರು ಮಹಿಂದ್ರಾ, ಟೈಟಾನ್, ಲೆನ್ಸ್ಕಾರ್ಟ್, ಮಾನ್ಯವರ ಮತ್ತು ರೊಮ್ಯಾಟೊ ಇತ್ಯಾದಿಗಳ ನಿದರ್ಶನಗಳನ್ನು ನೀಡಿದ್ದರು.
ಲೇಖನಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಇನ್ನೊಂದು ಆಧಾರರಹಿತ ಆರೋಪವಾಗಿದೆ ಎಂದು ಹೇಳಿದೆ. ರಾಹುಲ್ ಹೇಳಿಕೊಂಡಂತೆ ಮ್ಯಾಚ್-ಫಿಕ್ಸಿಂಗ್ ಏಕಸ್ವಾಮ್ಯ ಗುಂಪುಗಳು ವಿರುದ್ಧ ನ್ಯಾಯೋಚಿತ ಉದ್ಯಮಗಳ ಕುರಿತು ಮಾತು ದಾರಿ ತಪ್ಪಿಸುವಂಥದ್ದಾಗಿದೆ ಎಂದು ಬಿಜೆಪಿ ಎಕ್ಸ್ ಪೋಸ್ಟ್ನಲ್ಲಿ ಹೇಳಿದೆ.
‘ಪ್ರಿಯ ಬಾಲಕ ಬುದ್ಧಿ, ಸತ್ಯವನ್ನು ಪರಿಶೀಲಿಸದೆ ತೀರ್ಮಾನಕ್ಕೆ ಬರಬೇಡಿ. ಪ್ರಧಾನಿ ಮೋದಿಯವರಿಂದ ಈ ಕಂಪನಿಗಳು ಪಡೆದಿರುವ ಬೆಂಬಲದ ಬಗ್ಗೆ ಅವು ಏನು ಹೇಳುತ್ತಿವೆ ಎನ್ನುವುದನ್ನು ಆಲಿಸಿ’ ಎಂದು ಹೇಳಿರುವ ಬಿಜೆಪಿ, ರಾಹುಲ್ ತನ್ನ ಲೇಖನದಲ್ಲಿ ಹೆಸರಿಸಿದ್ದ ಒಂಭತ್ತು ಕಂಪನಿಗಳ ಉನ್ನತ ಅಧಿಕಾರಿಗಳನ್ನೊಳಗೊಂಡ ವೀಡಿಯೊ ತುಣುಕುಗಳನ್ನೂ ಹಂಚಿಕೊಂಡಿದ್ದು, ಮೋದಿಯವರ ನಾಯಕತ್ವ ಮತ್ತು ಆರ್ಥಿಕ ನೀತಿಗಳ ಕುರಿತು ಅವರ ಅಭಿಪ್ರಾಯಗಳನ್ನು ಕೇಳಿ ಎಂದು ಹೇಳಿದೆ.







