ಪ್ರಧಾನಿ ಸಂವಿಧಾನವನ್ನು ಎಸೆಯಲು ಬಯಸಿದ್ದರು: ರಾಹುಲ್ ಗಾಂಧಿ

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ಎಸೆಯುವ ಬಯಕೆ ಹೊಂದಿದ್ದರು. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಜಯ ಸಿಗದೇ ಇರುವುದರಿಂದ ಅವರು ಸಂವಿಧಾನಕ್ಕೆ ತಲೆಬಾಗಿದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಇಲ್ಲಿ ನಡೆದ ‘ಸಂವಿಧಾನ ಸುರಕ್ಷಾ ಸಮ್ಮೇಳನ’ದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನುಕರಿಸುತ್ತಾ ಈ ಆರೋಪ ಮಾಡಿದರು. ಇದು ಸಭಿಕರನ್ನು ನಗಗೆಡಲಲ್ಲಿ ಮುಳುಗಿಸಿತು.
ಸಂವಿಧಾನದ ಪ್ರತಿಯನ್ನು ತಲೆಯ ಹತ್ತಿರ ಹಿಡಿದುಕೊಂಡ ರಾಹುಲ್ ಗಾಂಧಿ ಅವರು, ನರೇಂದ್ರ ಮೋದಿ ಮೂರನೇ ಅವಧಿಯಲ್ಲಿ ಜಯ ಗಳಿಸಿದ ಬಳಿಕ ಸಂಸತ್ತು ಪ್ರವೇಶಿಸುವಾಗ ಹೀಗೆ ಮಾಡಿದ್ದರು ಎಂದರು. ಅವರು ಸಂವಿಧಾನವನ್ನು ಎಸೆಯಲು ಬಯಸಿದ್ದರು. ಆದರೆ, ನಮ್ಮ ಸಂಘಟಿತ ಹೋರಾಟ ಬಿಜೆಪಿ 400 ಪ್ಲಸ್ ಕ್ಷೇತ್ರಗಳಲ್ಲಿ ಜಯ ಗಳಿಸುವ ನಿರೀಕ್ಷೆಯನ್ನು ಹುಸಿಗೊಳಿಸಿತು ಎಂದರು.
ದೇಶದ ಸಂವಿಧಾನ ಕೇವಲ ಪುಸ್ತಕವಲ್ಲ. ಅದು ದಲಿತರ ಮೇಲಿನ ದೌರ್ಜನ್ಯ ಹಾಗೂ ಅವರ ಕಷ್ಟಗಳ ಬಗ್ಗೆಯೂ ಮಾತನಾಡುತ್ತದೆ. ದಲಿತರು, ಅಲ್ಪಸಂಖ್ಯಾತರು ಹಾಗೂ ಇತರ ಹಿಂದುಳಿದವರು ದೇಶದ ಜನಸಂಖ್ಯೆಯಲ್ಲಿ ಶೇ. 90ರಷ್ಟಿದ್ದಾರೆ. ಆದರೆ, ಅವರು ಇಂದಿಗೂ ವ್ಯವಸ್ಥೆಯ ಭಾಗವಾಗಿಲ್ಲ. ಇದಕ್ಕಾಗಿಯೆ ನಾವು ಜಾತಿ ಗಣತಿಗೆ ಆಗ್ರಹಿಸುತ್ತಿದ್ದೇವೆ. ಅಧಿಕಾರಿ ವರ್ಗದಲ್ಲಿ ಹಾಗೂ ಇತರ ವಲಯಗಳಲ್ಲಿ ಇತರ ಹಿಂದುಳಿದ ವರ್ಗ, ದಲಿತರು ಪಾಲುದಾರಿಕೆ ಎಷ್ಟು ಎಂದು ತಿಳಿಯಲು ಜಾತಿ ಗಣತಿಯ ಅಗತ್ಯತೆ ಇದೆ ಎಂದು ರಾಹುಲ್ ಗಾಂಧಿ ಹೇಳಿದರು.







