250 ರೂ.ಗಳ ಹಾಲು ನಷ್ಟಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬಿಹಾರದ ವ್ಯಕ್ತಿ

ರಾಹುಲ್ ಗಾಂಧಿ | PTI
ಪಾಟ್ನಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಾನು ಹಾಲನ್ನು ಕೆಳಕ್ಕೆ ಬೀಳಿಸಲು ಕಾರಣರಾಗಿದ್ದು,ತನಗೆ 250 ರೂ.ಗಳ ನಷ್ಟವುಂಟಾಗಿದೆ ಎಂದು ಆರೋಪಿಸಿ ಬಿಹಾರದ ವ್ಯಕ್ತಿಯೋರ್ವರು ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಸಮಷ್ಟಿಪುರ ಜಿಲ್ಲೆಯಲ್ಲಿ ಈ ವಿಲಕ್ಷಣ ಬೆಳವಣಿಗೆ ನಡೆದಿದೆ. ಕಳೆದ ವಾರ ರಾಹುಲ್ರ ‘ಭಾರತದ ವಿರುದ್ಧ ನನ್ನ ಹೋರಾಟ’ ಎಂಬ ಹೇಳಿಕೆಯನ್ನು ಕೇಳಿ ತನಗೆ ಆಘಾತವುಂಟಾಗಿತ್ತು. ತಾನು ಎಂತಹ ಆಘಾತದ ಸ್ಥಿತಿಯಲ್ಲಿದ್ದೆನೆಂದರೆ ಪ್ರತಿ ಲೀ.ಗೆ 50 ರೂ.ಬೆಲೆಯ ಐದು ಲೀ.ಹಾಲು ತುಂಬಿದ್ದ ಬಕೆಟ್ ತನ್ನ ಕೈಯಿಂದ ಕೆಳಕ್ಕೆ ಬಿದ್ದಿತ್ತು ಎಂದು ಸೋನುಪುರ ಗ್ರಾಮದ ನಿವಾಸಿಯಾಗಿರುವ ದೂರುದಾರ ಮುಕೇಶ ಚೌಧರಿ ಹೇಳಿದ್ದಾರೆ.
ರಾಹುಲ್ ದೇಶದ ಸಾರ್ವಭೌಮತೆಗೆ ಅಪಾಯವನ್ನೊಡ್ಡುತ್ತಿದ್ದಾರೆ ಎಂದು ಚೌಧರಿ ಆರೋಪಿಸಿದ್ದಾರೆ.
ದೇಶದ್ರೋಹಕ್ಕೆ ಸಂಬಂಧಿಸಿದ ಕಲಂ 152 ಸೇರಿದಂತೆ ಭಾರತೀಯ ನ್ಯಾಯ ಸಂಹಿತಾದ ವಿವಿಧ ಕಲಮ್ಗಳಡಿ ರಾಹುಲ್ ವಿರುದ್ಧ ವಿಚಾರಣೆಯನ್ನು ಕೋರಿ ತಾನು ರೊಸೆರಾ ಉಪ ವಿಭಾಗದ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯ ಪ್ರತಿಯನ್ನೂ ಚೌಧರಿ ಮಾಧ್ಯಮಗಳೆದುರು ಪ್ರದರ್ಶಿಸಿದರು.
ಅವರ ಅರ್ಜಿಯನ್ನು ನ್ಯಾಯಾಲಯವು ಅಂಗೀಕರಿಸಿದೆಯೇ ಎನ್ನುವುದು ತಿಳಿದು ಬಂದಿಲ್ಲ.





