ಇಂದಿರಾ ಗಾಂಧಿಗೆ ಗೌರವಾರ್ಪಣೆ ವೇಳೆ ಶೂ ತೆಗೆಯದ್ದಕ್ಕೆ ರಾಹುಲ್ ಗಾಂಧಿ ವಿರುದ್ಧ ಮಧ್ಯಪ್ರದೇಶ ಸಿಎಂ ಟೀಕೆ

PC : X
ಭೋಪಾಲ : ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪ್ರತಿಮೆಗೆ ಗೌರವ ಸಲ್ಲಿಸುವಾಗ ತನ್ನ ಶೂಗಳನ್ನು ಕಳಚದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಟೀಕಿಸಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು,‘ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ’ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಒಂದು ದಿನದ ಭೇಟಿಗಾಗಿ ಮಂಗಳವಾರ ಭೋಪಾಲಕ್ಕೆ ಆಗಮಿಸಿದ್ದ ರಾಹುಲ್ ರಾಜ್ಯ ಕಾಂಗ್ರೆಸ್ನ ಪ್ರಧಾನ ಕಚೇರಿಯ ಮುಂಭಾಗದಲ್ಲಿರುವ ಇಂದಿರಾ ಗಾಂಧಿಯವರ ಪ್ರತಿಮೆಗೆ ಗೌರವ ಸಲ್ಲಿಸಿದರು.
ನಂತರ ಕಾರ್ಯಕ್ರಮದ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು,ಅದರಲ್ಲಿ ರಾಹುಲ್ ಶೂಗಳನ್ನು ಧರಿಸಿಕೊಂಡೇ ಪುಷ್ಪ ನಮನಗಳನ್ನು ಸಲ್ಲಿಸುತ್ತಿರುವುದು ಕಂಡುಬಂದಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆಯೊಂದರಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ ಈ ಬಗ್ಗೆ ರಾಹುಲ್ರನ್ನು ಗುರಿಯಾಗಿಸಿಕೊಂಡರು.
‘ಲೋಕಸಭೆಯಲ್ಲಿ ವಿಪಕ್ಷ ನಾಯಕರು ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ಅವರು ಬರಬೇಕು. ಇದು ಪ್ರಜಾಪ್ರಭುತ್ವ. ಅವರು ತನ್ನ ಅಜ್ಜಿಗೆ ಪುಷ್ಪ ನಮನಗಳನ್ನು ಸಲ್ಲಿಸಿದರು,ಆದರೆ ತನ್ನ ಶೂಗಳನ್ನು ಕಳಚಿರಲಿಲ್ಲ. ಇದು ನನಗೆ ಸರಿಹೊಂದುವುದಿಲ್ಲ. ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ. ಈ ಬಗ್ಗೆ ಅವರು ಕಾಳಜಿ ವಹಿಸಬೇಕು’ ಎಂದು ಹೇಳಿದರು.
ದಿನವಿಡೀ ಇಲ್ಲಿ ಹಲವಾರು ಸಭೆಗಳಲ್ಲಿ ಭಾಗವಹಿಸಿದ್ದ ರಾಹುಲ್,ಕಾಂಗ್ರೆಸ್ನ ‘ಸಂಘಟನ್ ಸೃಜನ್ ಅಭಿಯಾನ’ಕ್ಕೆ ಚಾಲನೆಯನ್ನು ನೀಡಿದರು. ಅಭಿಯಾನವು 2028ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸುವ ಉದ್ದೇಶವನ್ನು ಹೊಂದಿದೆ.







