ಬಡವರನ್ನು ತಮ್ಮ ಕನಸು ಕಾಣುವ ಹಕ್ಕಿನಿಂದ ವಂಚಿಸಲಾಗಿದೆ: ವಸತಿ ವೆಚ್ಚ ಏರಿಕೆ ಕುರಿತು ರಾಹುಲ್ ಗಾಂಧಿ ಕಳವಳ

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಏರುತ್ತಿರುವ ವಸತಿ ವೆಚ್ಚ, ವಿಶೇಷವಾಗಿ ಬೃಹತ್ ನಗರಗಳಲ್ಲಿನ ವಸತಿ ವೆಚ್ಚ ಏರಿಕೆಯ ಕುರಿತು ಗುರುವಾರ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಮುಂದಿನ ಬಾರಿ ಯಾರಾದರೂ ಜಿಡಿಪಿ ಅಂಕಿ-ಸಂಖ್ಯೆ ಕುರಿತು ನಿಮಗೆ ಹೇಳಿದರೆ, ನೀವು ನಿಮ್ಮ ವಸತಿ ಆಯವ್ಯಯದ ಸತ್ಯವನ್ನು ಅವರಿಗೆ ತಿಳಿಸಿ” ಎಂದು ವ್ಯಂಗ್ಯವಾಗಿ ಸೂಚಿಸಿದ್ದಾರೆ.
ಮಹಾರಾಷ್ಟ್ರದ ಶೇ. 5ರಷ್ಟು ಶ್ರೀಮಂತ ಪಟ್ಟಣವಾಸಿ ಕುಟುಂಬಗಳು ಕೂಡಾ ಮುಂಬೈನಲ್ಲಿ ಒಂದು ಮನೆ ಖರೀದಿಸಲು 100 ವರ್ಷದ ಉಳಿತಾಯ ಮಾಡಬೇಕಾಗುತ್ತಿದೆ ಎಂಬ ಮಾಧ್ಯಮ ಸಂಸ್ಥೆಯ ವರದಿಯೊಂದನ್ನು ರಾಹುಲ್ ಗಾಂಧಿ ತಮ್ಮ ವಾಟ್ಸ್ ಆ್ಯಪ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ.
“ಹೌದು, ನೀವು ಓದುತ್ತಿರುವುದು ಸರಿಯಾಗಿದೆ. ನಿಮಗೆ ನಂಬಿಕೆ ಬಾರದಿದ್ದರೆ, ನಾನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ: ಮುಂಬೈನಲ್ಲಿ ಮನೆಯೊಂದನ್ನು ಖರೀದಿಸಬೇಕಿದ್ದರೆ, ಭಾರತದಲ್ಲಿರುವ ಶೇ. 5ರಷ್ಟು ಶ್ರೀಮಂತ ಕುಟುಂಬಗಳೂ ಕೂಡಾ ತಮ್ಮ ಆದಾಯದ ಶೇ. 30ರಷ್ಟು ಉಳಿತಾಯವನ್ನು 109 ವರ್ಷಗಳ ಕಾಲ ಕೂಡಿಡಬೇಕಾಗುತ್ತದೆ!”, ಎಂದು ಅವರು ಆಘಾತ ವ್ಯಕ್ತಪಡಿಸಿದ್ದಾರೆ.
“ನೀವು ಅವಕಾಶ ಹಾಗೂ ಯಶಸ್ಸಿಗಾಗಿ ಹುಡುಕಾಡುತ್ತಿರುವ ಬಹುತೇಕ ಬೃಹತ್ ನಗರಗಳಲ್ಲಿನ ಪರಿಸ್ಥಿತಿ ಹೀಗಿದೆ ಹಾಗೂ ಅಷ್ಟು ದೊಡ್ಡ ಮೊತ್ತದ ಉಳಿತಾಯ ಎಲ್ಲಿಂದ ಬರಲು ಸಾಧ್ಯ?" ಎಂದು ಅವರು ಪ್ರಶ್ನಿಸಿದ್ದಾರೆ.
“ಈಗಲೂ ಬಡವರು, ಮಧ್ಯಮ ವರ್ಗದ ಜನರಲ್ಲಿ ಒಂದಲ್ಲ ಒಂದು ದಿನ ನಾವು ಸ್ವಂತ ಮನೆಯನ್ನು ಹೊಂದಲಿದ್ದೇವೆ ಎಂಬ ಕನಸು ಇದೆ. ಆದರೆ, ಏರಿಕೆಯಾಗುತ್ತಿರುವ ಮಕ್ಕಳ ಶಿಕ್ಷಣ ವೆಚ್ಚ, ದುಬಾರಿ ಚಿಕಿತ್ಸೆಯ ಬಗೆಗಿನ ಕಳವಳ, ಪೋಷಕರ ಜವಾಬ್ದಾರಿ ಅಥವಾ ಕುಟುಂಬಕ್ಕಾಗಿ ಸಣ್ಣ ಕಾರೊಂದನ್ನು ಹೊಂದುವುದು ಬಡವರು ಹಾಗೂ ಮಧ್ಯಮ ವರ್ಗದವರಿಗೆ ವಂಶಪಾರಂಪರ್ಯವಾಗಿ ಬಂದಿಲ್ಲ; ಬದಲಿಗೆ, ಅದು ಅವರ ಜವಾಬ್ದಾರಿಯಾಗಿದೆ. ಹೀಗಿದ್ದೂ, ಶ್ರೀಮಂತರಿಗೂ ಕೂಡಾ ಒಂದು ದಿನ ಮನೆ ಖರೀದಿಸಲು 109 ವರ್ಷ ಕಾಯಬೇಕಾಗಿದೆ ಎಂದರೆ, ಬಡವರನ್ನು ಅವರ ಕನಸುಗಳಿಂದ ಹೇಗೆ ವಂಚಿಸಲಾಗಿದೆ ಎಂಬುದನ್ನು ಯಾರಾದರೂ ಅರ್ಥ ಮಾಡಿಕೊಳ್ಳಬಹುದು” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
“ಪ್ರತಿ ಕುಟುಂಬಕ್ಕೂ ಅನುಕೂಲಕರ ನಾಲ್ಕು ಗೋಡೆಗಳು ಹಾಗೂ ತಲೆಯ ಮೇಲೆ ಸುರಕ್ಷಿತ ಸೂರು ಬೇಕಾಗಿದೆ. ದುರದೃಷ್ಟವಶಾತ್, ಆದರದು ಬಹುತೇಕ ನಿಮ್ಮ ಇಡೀ ಜೀವನದ ಸಂಪೂರ್ಣ ದುಡಿಮೆ ಹಾಗೂ ಉಳಿತಾಯಕ್ಕೆ ಸಮವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.







