ಸ್ಯಾನಿಟರಿ ಪ್ಯಾಡ್ ಮೇಲೆ ತಿರುಚಿದ ರಾಹುಲ್ ಗಾಂಧಿ ಫೋಟೊ: ಕಾಮೆಡಿಯನ್ ರತನ್ ರಂಜನ್ ವಿರುದ್ಧ ಎಫ್ಐಆರ್ ದಾಖಲು

ರಾಹುಲ್ ಗಾಂಧಿ | PC : PTI
ಹೈದರಾಬಾದ್: ಸ್ಯಾನಿಟರಿ ಪ್ಯಾಡ್ ಮೇಲೆ ಕಾಂಗ್ರೆಸದ್ ನಾಯಕ ರಾಹುಲ್ ಗಾಂಧಿಯ ಚಿತ್ರವಿರುವಂತೆ ತಿರುಚಿ, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಿದ ಆರೋಪದ ಮೇಲೆ ಕಾಮೆಡಿಯನ್ ರತನ್ ರಂಜನ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವ ತೆಲಂಗಾಣ ಯುವ ಕಾಂಗ್ರೆಸ್ ಅಧ್ಯಕ್ಷ ಜಕ್ಕಿಡಿ ಶಿವ ಚರಣ್ ರೆಡ್ಡಿ, ರಂಜನ್ ಹಾಗೂ ಇನ್ನಿತರರು ರಾಹುಲ್ ಗಾಂಧಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ದುರುದ್ದೇಶಪೂರಿತ ಹಾಗೂ ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದು, ಮಹಿಳೆಯರನ್ನು ಗುರಿಯಾಗಿಸಿಕೊಂಡು ಅಶ್ಲೀಲ ತುಣುಕುಗಳನ್ನು ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರುದಾರ ಜಕ್ಕಿಡಿ ಶಿವ ಚರಣ್ ರೆಡ್ಡಿ ಪ್ರಕಾರ, ಆರೋಪಿ ರತನ್ ರಂಜನ್ ರಾಹುಲ್ ಗಾಂಧಿಯ ತಿರುಚಿದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆರೋಪಿ ರಜತ್ ರಂಜನ್ ಕೇವಲ ಬಿಹಾರದಲ್ಲಿ ಮಾತ್ರ ಮಹಿಳೆಯರ ಘನತೆಗೆ ಧಕ್ಕೆ ತಂದಿಲ್ಲ, ಬದಲಿಗೆ, ದೇಶಾದ್ಯಂತ ಈ ಆಶ್ಲೀಲ ಚಿತ್ರವವನ್ನು ಪ್ರಕಟಿಸುವ/ಹರಡುವ ಮೂಲಕ ಮಹಿಳೆಯರ ಆರೋಗ್ಯವನ್ನು ಕ್ಷುಲ್ಲಕ ಸಂಗತಿಯನ್ನಾಗಿಸಿದ್ದಾರೆ ಎಂದೂ ಆರೋಪಿಸಿದ್ದಾರೆ.
ಮಹಿಳೆಯರು ಆರೋಗ್ಯಕರ ಜೀವನ ಸಾಗಿಸುವುದನ್ನು ಖಾತರಿಪಡಿಸಲು, ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನದ ಭಾಗವಾಗಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್, ಬಿಹಾರದಲ್ಲಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಿತ್ತು. ಈ ಅಭಿಯಾನದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಸಲುವಾಗಿ, ರಾಹುಲ್ ಗಾಂಧಿಯವರ ಭಾವಚಿತ್ರವನ್ನು ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಕಂಡು ಬರುವಂತೆ ತಿರುಚಿ ಪೋಸ್ಟ್ ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.







