ಬಿಹಾರ ಚುನಾವಣೆಯಲ್ಲಿ ವಂಚನೆ ಎಸಗಲು ಬಿಜೆಪಿ, ಚುನಾವಣಾ ಆಯೋಗ ಸಂಚು: ರಾಹುಲ್ ಗಾಂಧಿ ಆರೋಪ

ರಾಹುಲ್ ಗಾಂಧಿ | PTI
ಭುವನೇಶ್ವರ: ಬಿಜೆಪಿ ಹಾಗೂ ಭಾರತೀಯ ಚುನಾವಣಾ ಆಯೋಗದ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಈ ವರ್ಷಾಂತ್ಯದ ವೇಳೆಗೆ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಂಚನೆಯೆಸಗಲು ಅವು ಸಂಚು ಹೂಡಿದೆಯೆಂದು ಆಪಾದಿಸಿದರು.
ಒಡಿಶಾದ ಬಿಜೆಪಿ ಸರಕಾರವು ಬಡವರ ಸಂಪತ್ತನ್ನು ಲೂಟಿಗೈಯುತ್ತಿದೆ ಹಾಗೂ ರಾಜ್ಯದಲ್ಲಿ ಬೃಹತ್ ಕಾರ್ಪೋರೇಟ್ ಗಳಿಗೆ ಬೆಂಬಲವನ್ನು ನೀಡುತ್ತಿದೆಯೆಂದು ಹೇಳಿದರು.
ಭುವನೇಶ್ವರದ ಬಾರಾಮುಂಡಾ ಮೈದಾನದಲ್ಲಿ ನಡೆದ ಸಂವಿಧಾನ ಬಚಾವೋ ಸಮಾವೇಶ (ಸಂವಿಧಾನ ರಕ್ಷಿಸಿ)ವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ಬಿಜೆಪಿಯು ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆಯೆಂದು ಹೇಳಿದರು.
ಬಿಹಾರದಲ್ಲಿ ಬಿಜೆಪಿಯು ‘ಚುನಾವ್ ಚೋರಿ’ (ಚುನಾವಣಾ ಕಳ್ಳತನ) ನಡೆಸಲು ಚುನಾವಣಾ ಆಯೋಗವನ್ನು ಬಳಸಿಕೊಳ್ಳುತ್ತಿದೆಯೆಂದು ರಾಹುಲ್ ಆಪಾದಿಸಿದರು.
‘‘ ಮಹಾರಾಷ್ಟ್ರದಲ್ಲಿ ಚುನಾವಣಾ ಕಳ್ಳತನ ನಡೆಸಿದಂತೆ, ಬಿಹಾರದಲ್ಲೂ ಚುನಾವಣೆಯನ್ನು ‘ಅಪಹರಿಸಲು’ ಸಂಚು ನಡೆಯುತ್ತಿದೆ’’ ಎಂದವರು ಹೇಳಿದರು.
ಬಿಹಾರದಲ್ಲಿ ಚುನಾವಣಾ ಕಳ್ಳತನಕ್ಕಾಗಿ ಚುನಾವಣಾ ಆಯೋಗವು ಹೊಸ ಸಂಚನ್ನು ಹೂಡಿದೆ. ಅದು ಸ್ವತಂತ್ರವಾಗಿ ಕಾರ್ಯಾಚರಿಸುವ ಬದಲು ಬಿಜೆಪಿಯ ಏಜೆಂಟ್ ನಂತೆ ಕೆಲಸ ಮಾಡುತ್ತಿದೆ ಎಂದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮವೆಸಗಲು ಒಂದು ಕೋಟಿ ಮತದಾರರನ್ನು ಹೊಸತಾಗಿ ಮತದಾರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತು. ಇದೀಗ ಬಿಹಾರದಲ್ಲಿಯೂ ಅಂತಹದೇ ಪ್ರಯತ್ನವನ್ನು ನಡೆಸಲಾಗುತ್ತಿದೆ. ಆದಾಗ್ಯೂ ಬಿಹಾರದಲ್ಲಿ ಚುನಾವಣಾ ಆಯೋಗವು ಚುನಾವಣಾ ಅಕ್ರಮವನ್ನು ಎಸಗುವುದಕ್ಕೆ ನಾವು ಆಸ್ಪದ ನೀಡುವುದಿಲ್ಲ’’ಎಂದರು.
ಪಿಎಂ ಫಸಲ್ ಬಿಮಾ ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ರಾಹುಲ್ ತರಾಟೆಗೆ ತೆಗೆದುಕೊಂಡರು. ಫಸಲ್ ಬಿಮಾ ಯೋಜನೆಗಾಗಿ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಮತ್ತು ಈ ಯೋಜನೆಯ ಮೂಲಕ ಸರಕಾರವು ಮೂರ್ನಾಲ್ಕು ಬೃಹತ್ ಕಂಪೆನಿಗಳಿಗೆ ದಾರಿ ಮಾಡಿಕೊಟ್ಟಿವೆ ಎಂದವರು ಆಪಾದಿಸಿದರು.
ಒಡಿಶಾದಲ್ಲಿ ಜಗನ್ನಾಥ ರಥಯಾತ್ರೆಯನ್ನು ಲಕ್ಷಾಂತರ ಜನರು ವೀಕ್ಷಿಸಿ,ಅದರೊಂದಿಗೆ ಸಾಗಿದರು. ಆಗೊಂದು ನಾಟಕ ನಡೆಯಿತು. ಆದಾನಿ ಹಾಗೂ ಅವರ ಕುಟುಂಬಕ್ಕಾಗಿ ರಥಗಳನ್ನು ನಿಲ್ಲಿಸಲಾಯಿತು. ಒಡಿಶಾ ಸರಕಾರದ ಕುರಿತು ಎಲ್ಲವನ್ನೂ ಅರಿತುಕೊಳ್ಳಲು ಈ ನಿದರ್ಶನವೊಂದೇ ಸಾಕು ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದರು.







