ಹರ್ಯಾಣದಲ್ಲಿ ಹದಿಹರೆಯದ ದಲಿತ ಯುವಕನ ಕೊಲೆ | ಕುಟುಂಬಕ್ಕೆ ನ್ಯಾಯ ನಿರಾಕರಣೆಯು ಬಿಜೆಪಿ-ಆರೆಸ್ಸೆಸ್ ನ ಮನುವಾದಿ ವ್ಯವಸ್ಥೆಯ ಕೊಳಕು ಮುಖ ತೋರಿಸುತ್ತಿದೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ರಾಹುಲ್ ಗಾಂಧಿ | PTI
ಹೊಸದಿಲ್ಲಿ: ಹರ್ಯಾಣದ ಹಿಸ್ಸಾರ್ ನಲ್ಲಿ ಹದಿಹರೆಯದ ದಲಿತ ಯುವಕನೋರ್ವನ ಕೊಲೆ ಪ್ರಕರಣವನ್ನು ಗುರುವಾರ ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ನ್ಯಾಯವನ್ನು ಕೋರಿದ್ದಕ್ಕಾಗಿ ಆತನ ಕುಟುಂಬಕ್ಕೆ ನೀಡಿರುವ ಕಿರುಕುಳವು ಕೇವಲ ಅಪರಾಧವಲ್ಲ, ಅದು ದಲಿತರ ವಿರುದ್ಧ ತಾರತಮ್ಯ ಮಾಡುವ ಬಿಜೆಪಿ-ಆರೆಸ್ಸೆಸ್ನ ‘ಮನುವಾದಿ ವ್ಯವಸ್ಥೆ’ಯ ಕೊಳಕು ಮುಖವನ್ನು ಬಹಿರಂಗಗೊಳಿಸಿದೆ ಎಂದು ಆರೋಪಿಸಿದ್ದಾರೆ.
ತಾನು ಮತ್ತು ತನ್ನ ಪಕ್ಷ ಹಿಸ್ಸಾರ್ ನಲ್ಲಿ ಕೊಲೆಯಾದ 16ರ ಹರೆಯದ ದಲಿತ ಗಣೇಶ ವಾಲ್ಮೀಕಿಯ ಕುಟುಂಬದೊಂದಿಗೆ ದೃಢವಾಗಿ ನಿಲ್ಲುವುದಾಗಿ ಹೇಳಿರುವ ಅವರು,ಕೊಲೆಯ ಹಿಂದಿರುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
‘ಅಧಿಕಾರವು ಮನುವಾದಿ ಸಿದ್ಧಾಂತದ ಮಡಿಲಲ್ಲಿ ಕುಳಿತಾಗ ದಲಿತರ ಜೀವಗಳಿಗೆ ಬೆಲೆಯಿಲ್ಲ. ವಾಲ್ಮೀಕಿಯ ಕೊಲೆ ಮತ್ತು ಆತನ ಕುಟುಂಬದ ಮೇಲಿನ ಕ್ರೌರ್ಯವು ಕೇವಲ ಅಪರಾಧವಲ್ಲ,ಅದು ಇಂದು ಭಾರತದಲ್ಲಿ ಬಹುಜನರ ಜೀವಗಳಿಗೆ ಬೆಲೆಯಿಲ್ಲ,ಅವರು ಸಮಾನತೆ ಮತ್ತು ಗೌರವಕ್ಕೆ ಅರ್ಹರಲ್ಲ ಎಂದು ಪರಿಗಣಿಸುವ ಬಿಜೆಪಿ-ಆರೆಸ್ಸೆಸ್ನ ಮನುವಾದಿ ವ್ಯವಸ್ಥೆಯ ಕೊಳಕು ಮುಖವಾಗಿದೆ’ ಎಂದು ರಾಹುಲ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ವಾಲ್ಮೀಕಿಯನ್ನು ಪೋಲಿಸರು ಕೊಂದಿದ್ದಾರೆ ಎಂದು ಕುಟುಂಬವು ಆರೋಪಿಸಿದೆ,ಆದರೆ ಒಂಭತ್ತು ದಿನಗಳ ನಂತರವೂ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ ಎಂದೂ ರಾಹುಲ್ ಹೇಳಿದ್ದಾರೆ.
ಕುಟುಂಬವು ನ್ಯಾಯಕ್ಕಾಗಿ ಕೋರಿದಾಗ ಅವರಿಗೆ ಕಿರುಕುಳ ನೀಡಲಾಗಿದೆ. ಇದು ಪ್ರತ್ಯೇಕ ಘಟನೆಯಲ್ಲ,ಕಳೆದ 11 ವರ್ಷಗಳಲ್ಲಿ ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯಗಳು ಅನಿಯಂತ್ರಿತವಾಗಿ ಹೆಚ್ಚಿವೆ. ಏಕೆಂದರೆ ಅಧಿಕಾರದಲ್ಲಿರುವ ಬಿಜೆಪಿಯು ತಾರತಮ್ಯದಿಂದ ಕೂಡಿದ ಹಿಂಸಾಚಾರಕ್ಕೆ ಸ್ವಾತಂತ್ರ್ಯ ನೀಡಿದೆ ಎಂದು ರಾಹುಲ್ ಆರೋಪಿಸಿದ್ದಾರೆ.







