ಭಾರತ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವವರೆಗೂ ‘ಮೇಕ್ ಇನ್ ಇಂಡಿಯಾ’ ಭಾಷಣದಲ್ಲೇ ಉಳಿಯಲಿದೆ: ರಾಹುಲ್ ಗಾಂಧಿ ವ್ಯಂಗ್ಯ

ರಾಹುಲ್ ಗಾಂಧಿ | PTI
ಹೊಸ ದಿಲ್ಲಿ: ಕೇಂದ್ರ ಸರಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದು ಉತ್ಪಾದನೆಯನ್ನೇ ಮಾಡದೆ, ಕೇವಲ ಬಿಡಿ ಭಾಗಗಳ ಜೋಡಣೆ ಮಾಡುವ ಕೆಲಸವಾಗಿದೆ ಎಂದು ಟೀಕಾಪ್ರಹಾರ ನಡೆಸಿದರು. ಕೇವಲ ಬಿಡಿ ಭಾಗಗಳ ಜೋಡಣೆಯ ಹಂತದಿಂದ ಮೇಲೇರಲು ತಳ ಹಂತದ ಬದಲಾವಣೆ ಮಾತ್ರ ನೆರವು ನೀಡಲಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಭಾರತವು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವವರೆಗೂ, ಉದ್ಯೋಗದ ಮಾತುಗಳು, ಪ್ರಗತಿ ಹಾಗೂ ‘ಮೇಕ್ ಇನ್ ಇಂಡಿಯಾ’ ಬರೀ ಭಾಷಣಗಳಲ್ಲೇ ಉಳಿಯಲಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ಭಾರತವು ಬಿಡಿ ಭಾಗಗಳ ಜೋಡಣೆಯ ಹಂತದಿಂದ ಮೇಲೇರಿ, ನೈಜ ಉತ್ಪಾದಕ ಶಕ್ತಿಯ ಹಂತಕ್ಕೆ ತಲುಪಬೇಕಾದರೆ ಹಾಗೂ ಚೀನಾದೊಂದಿಗೆ ಸಮಾನ ಸ್ಪರ್ಧೆ ನಡೆಸಬೇಕಾದರೆ, ತಳ ಹಂತದಲ್ಲಿ ಬದಲಾವಣೆಯ ಅಗತ್ಯವಿದೆ” ಎಂದು ಅವರು ಸಲಹೆ ನೀಡಿದ್ದಾರೆ.
“ಭಾರತದಲ್ಲಿ ತಯಾರಾಗುತ್ತಿರುವ ಬಹುತೇಕ ಟಿವಿಗಳ ಶೇ. 80ರಷ್ಟು ಬಿಡಿ ಭಾಗಗಳು ಚೀನಾದಿಂದ ಆಮದಾಗುತ್ತಿವೆ ಎಂಬುದು ನಿಮಗೆ ತಿಳಿದಿದೆಯೆ? ‘ಮೇಕ್ ಇನ್ ಇಂಡಿಯಾ’ ಹೆಸರಿನಲ್ಲಿ ನಾವು ಕೇವಲ ಬಿಡಿ ಭಾಗಗಳ ಜೋಡಣೆ ಮಾಡುತ್ತಿದ್ದೇವೆಯೇ ಹೊರತು, ವಾಸ್ತವವಾಗಿ ಉತ್ಪಾದನೆ ಮಾಡುತ್ತಿಲ್ಲ. ಐಫೋನ್ನಿಂದ ಹಿಡಿದು ಟಿವಿಯವರೆಗೆ ಬಿಡಿ ಭಾಗಗಳು ಹೊರ ದೇಶಗಳಿಂದ ಭಾರತಕ್ಕೆ ಬರುತ್ತಿವೆ ಹಾಗೂ ಇಲ್ಲಿ ಕೇವಲ ಜೋಡಣೆ ಮಾಡುತ್ತಿದ್ದೇವೆ” ಎಂದು ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.







