ಚುನಾವಣಾ ಆಯೋಗ ಅಕ್ರಮಕ್ಕೆ ಅವಕಾಶ ನೀಡಿದೆ ಎಂಬುದಕ್ಕೆ 100% ಪುರಾವೆ ಇದೆ : ರಾಹುಲ್ ಗಾಂಧಿ
"ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಒಂದು ಕ್ಷೇತ್ರದಲ್ಲಿ ಅಕ್ರಮ ನಡೆದಿದೆ"

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಕರ್ನಾಟಕದ ಒಂದು ಕ್ಷೇತ್ರದಲ್ಲಿ ಚುನಾವಣಾ ಆಯೋಗ ಅಕ್ರಮಕ್ಕೆ ಅವಕಾಶ ನೀಡಿದೆ ಎಂಬುದಕ್ಕೆ ಕಾಂಗ್ರೆಸ್ ಬಳಿ ಶೇಕಡಾ 100ರಷ್ಟು ಸ್ಪಷ್ಟ ಪುರಾವೆ ಇದೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಚುನಾವಣಾ ಆಯೋಗ ಭಾರತದ ಚುನಾವಣಾ ಆಯೋಗದಂತೆ ಕಾರ್ಯನಿರ್ವಹಿಸುತ್ತಿಲ್ಲ. ಅದು ತನ್ನ ಕೆಲಸವನ್ನು ಮಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಬಿಹಾರ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿರುವ RJD ನಾಯಕ ತೇಜಸ್ವಿ ಯಾದವ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಕರ್ನಾಟಕದ ಒಂದು ಕ್ಷೇತ್ರದಲ್ಲಿ ಚುನಾವಣಾ ಆಯೋಗ ಮೋಸ ಮಾಡಲು ಅವಕಾಶ ನೀಡಿದೆ ಎಂಬುದಕ್ಕೆ ತಮ್ಮ ಪಕ್ಷವು ಶೇಕಡಾ 100ರಷ್ಟು ಸ್ಪಷ್ಟ ಪುರಾವೆ ಹೊಂದಿದೆ ಎಂದು ತಿಳಿಸಿದ್ದಾರೆ.
ʼಶೇಕಡಾ 90 ಅಲ್ಲ, ನಾವು ಅದನ್ನು ನಿಮಗೆ ತೋರಿಸಲು ನಿರ್ಧರಿಸಿದಾಗ, ಅದು 100ರಷ್ಟು ದೃಢವಾದ ಪುರಾವೆಯಾಗಿದೆʼ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದರು.
ನಾವು ಒಂದು ಕ್ಷೇತ್ರದಲ್ಲಿ ಪರಿಶೀಲನೆ ನಡೆಸಿದಾಗ ಇದು ನಮ್ಮ ಗಮನಕ್ಕೆ ಬಂದಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಇದೇ ನಾಟಕ ನಡೆಯುತ್ತಿದೆ ಎಂದು ನನಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ. ಸಾವಿರಾರು ಹೊಸ ಮತದಾರರು, ಅವರ ವಯಸ್ಸು ಎಷ್ಟು? ಒಂದು ಕ್ಷೇತ್ರದಲ್ಲಿ 45, 50, 60, 65 ವರ್ಷ ಎಂದು ಹೇಳಿಕೊಂಡು ಸಾವಿರಾರು ಜನರ ಹೆಸರು ಸೇರ್ಪಡೆಯಾಗಿದೆ. ಇದಲ್ಲದೆ ಮತದಾರರ ಹೆಸರನ್ನು ಡಿಲಿಟ್ ಮಾಡಿರುವುದು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ಹೊಸ ಮತದಾರರ ಸೇರ್ಪಡೆಯನ್ನು ನಾವು ಪತ್ತೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ನಾನು ಚುನಾವಣಾ ಆಯೋಗಕ್ಕೆ ಒಂದು ಸಂದೇಶ ಕಳುಹಿಸಲು ಬಯಸುತ್ತೇನೆ. ನೀವು ಇದರಿಂದ ತಪ್ಪಿಸಿಕೊಳ್ಳುತ್ತೀರಿ ಎಂದು ನೀವು ಭಾವಿಸಿದರೆ, ಅದು ತಪ್ಪು. ನೀವು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನಾವು ಆ ತಪ್ಪಿನ ಕುರಿತಾದ ಪುರಾವೆಯೊಂದಿಗೆ ನಿಮ್ಮ ಬಳಿಗೆ ಬರುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.







