ಕೃಷಿ ಕಾಯ್ದೆಗಳನ್ನು ವಿರೋಧಿಸಿದ್ದಕ್ಕಾಗಿ ನನಗೆ ಬೆದರಿಕೆಯೊಡ್ಡಲು ಅರುಣ್ ಜೇಟ್ಲಿಯನ್ನು ನನ್ನ ಬಳಿ ಕಳುಹಿಸಲಾಗಿತ್ತು: ರಾಹುಲ್ ಗಾಂಧಿ

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ನರೇಂದ್ರ ಮೋದಿ ಸರಕಾರವು ತಂದಿದ್ದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಲು ಪ್ರಯತ್ನಿಸಿದ್ದಕ್ಕಾಗಿ ತನಗೆ ಬೆದರಿಕೆಯನ್ನು ಒಡ್ಡಲು ಎನ್ಡಿಎ ಸರಕಾರವು ದಿವಂಗತ ಕೇಂದ್ರ ಸಚಿವ ಅರುಣ್ ಜೇಟ್ಲಿಯವರನ್ನು ತನ್ನ ಬಳಿಗೆ ಕಳುಹಿಸಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶನಿವಾರ ಹೇಳಿದರು.
‘ನಾನು ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿದ್ದಾಗ ನನಗೆ ಬೆದರಿಕೆಯೊಡ್ಡಲು ಜೇಟ್ಲಿಯವರನ್ನು ನನ್ನ ಬಳಿಗೆ ಕಳುಹಿಸಿದ್ದು ನನಗೆ ನೆನಪಿದೆ. ನೀವು ಸರಕಾರವನ್ನು ವಿರೋಧಿಸುವುದನ್ನು, ಕೃಷಿ ಕಾಯ್ದೆಗಳ ವಿರುದ್ಧ ಹೋರಾಟವನ್ನು ಮುಂದುವರಿಸಿದರೆ ನಾವು ನಿಮ್ಮ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಜೇಟ್ಲಿ ನನಗೆ ತಿಳಿಸಿದ್ದರು. ನಾನು ಅವರನ್ನು ನೋಡಿ ನೀವು ಯಾರೊಂದಿಗೆ ಮಾತನಾಡುತ್ತಿದ್ದೀರಿ ಎನ್ನುವುದು ನಿಮಗೆ ತಿಳಿದಿಲ್ಲ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದ್ದೆ’ ಎಂದರು.
ಕಾಂಗ್ರೆಸ್ ಪಕ್ಷವು ಆಯೋಜಿಸಿದ ‘ಸಾಂವಿಧಾನಿಕ ಸವಾಲುಗಳು-ದೃಷ್ಟಿಕೋನಗಳು ಮತ್ತು ಮಾರ್ಗಗಳು’ ಶೀರ್ಷಿಕೆಯ ವಾರ್ಷಿಕ ಕಾನೂನು ಸಮಾವೇಶ 2025ನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಚುನಾವಣಾ ಆಯೋಗದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿ,ಅದು ದೊಡ್ಡ ಪ್ರಮಾಣದಲ್ಲಿ ಮತದಾರರ ವಂಚನೆಯಲ್ಲಿ ಶಾಮೀಲಾಗಿದೆ ಎಂದು ಆರೋಪಿಸಿದರು.
‘ಸತ್ಯವೇನೆಂದರೆ ಭಾರತದಲ್ಲಿ ಚುನಾವಣಾ ವ್ಯವಸ್ಥೆಯು ಈಗಾಗಲೇ ಸತ್ತು ಹೋಗಿದೆ. ಭಾರತದ ಪ್ರಧಾನಿ ಅತ್ಯಂತ ಕಡಿಮೆ ಬಹುಮತದೊಂದಿಗೆ ಅಧಿಕಾರದಲ್ಲಿದ್ದಾರೆ. 15 ಸ್ಥಾನಗಳಲ್ಲಿ ಅಕ್ರಮಗಳು ನಡೆದಿರದಿದ್ದರೆ,ಈ ಸಂಖ್ಯೆ 70ರಿಂದ 80ರಷ್ಟಿದೆ ಎಂದು ನಾವು ಶಂಕಿಸಿದ್ದೇವೆ,ಅವರು ಭಾರತದ ಪ್ರಧಾನಿಯಾಗುತ್ತಿರಲಿಲ್ಲ. ಲೋಕಸಭಾ ಚುನಾವಣೆಗಳಲ್ಲಿ ಹೇಗೆ ಅಕ್ರಮಗಳನ್ನು ನಡೆಸಬಹುದು ಮತ್ತು ಅಕ್ರಮಗಳನ್ನು ನಡೆಸಲಾಗಿದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ನಾವು ನಿಮಗೆ ಸಾಬೀತು ಮಾಡುತ್ತೇವೆ’ಎಂದು ಅವರು ಹೇಳಿದರು.
ಬ್ರಿಟಿಷ್ರಿಂದ ಸ್ವಾತಂತ್ರ್ಯವನ್ನು ಗಳಿಸಿದ್ದಕ್ಕಾಗಿ ಇತರರೊಂದಿಗೆ ವಕೀಲರಿಗೂ ಹೆಗ್ಗಳಿಕೆಯನ್ನು ನೀಡಿದ ರಾಹುಲ್,ವಾಸ್ತವದಲ್ಲಿ ಸ್ವಾತಂತ್ರ್ಯಕ್ಕಾಗಿ ಕಾನೂನುಬದ್ಧವಾಗಿ ಹೋರಾಡಲಾಗಿತ್ತು. ಆದರೆ ವಕೀಲರು ನಿರ್ಮಿಸಿದ್ದ ಸಾಂವಿಧಾನಿಕ ವಾಸ್ತುಶಿಲ್ಪವನ್ನು ನಾಶಗೊಳಿಸಲಾಗಿದೆ ಎಂದು ಆರೋಪಿಸಿದರು. ವಕೀಲರು ಇಲ್ಲದಿದ್ದರೆ ಸಂವಿಧಾನದ ಕುರಿತು ಚರ್ಚೆಗಳೇ ನಡೆಯುತ್ತಿರಲಿಲ್ಲ ಎಂದರು.
ರಫೇಲ್ ಒಪ್ಪಂದದ ಕುರಿತು ಮಾತನಾಡಿದ ರಾಹುಲ್,‘ಈ ಒಪ್ಪಂದದ ಕುರಿತು ನಮ್ಮ ಬಳಿ ದಾಖಲೆಯೊಂದಿತ್ತು. ಪ್ರಧಾನಿ ಕಚೇರಿ ಮತ್ತು ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್ಎಸ್ಎ) ಒಪ್ಪಂದದಲ್ಲಿ ಹಸ್ತಕ್ಷೇಪ ಮಾಡಿವೆ ಮತ್ತು ಅದಕ್ಕೆ ಹಾನಿಯನ್ನುಂಟು ಮಾಡಿವೆ ಎನ್ನುವುದನ್ನು ದಾಖಲೆಯು ಸ್ಪಷ್ಟವಾಗಿ ಉಲ್ಲೇಖಿಸಿತ್ತು. ವಿಶ್ವದ ಯಾವುದೇ ದೇಶದಲ್ಲಾಗಿದ್ದರೆ ಈ ದಾಖಲೆಯು ಯಾವುದೇ ಸರಕಾರವನ್ನು ಉರುಳಿಸುತ್ತಿತ್ತು,ಆದರೆ ಇಲ್ಲಿ ಏನೂ ಆಗಲಿಲ್ಲ. ಆ ದಾಖಲೆ ಎಲ್ಲಿ ಹೋಯಿತು,ದಾಖಲೆ ಎಲ್ಲಿ ಸತ್ತು ಹೋಯಿತು ಎನ್ನುವುದು ನಿಮಗೆ ಗೊತ್ತಿದೆ ’ಎಂದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ, ಅಭಿಷೇಕ್ ಸಿಂಘ್ವಿ, ಜೈರಾಮ ರಮೇಶ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಸೇರಿದಂತೆ ಹಲವಾರು ಹಿರಿಯ ನಾಯಕರು ಸಮಾವೇಶದಲ್ಲಿ ಉಪಸ್ಥಿತರಿದ್ದರು.







