ರಾಹುಲ್ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿಕೆಗೆ ಕಾಂಗ್ರೆಸ್ ನಾಯಕರ ಆಕ್ಷೇಪ

ರಾಹುಲ್ ಗಾಂಧಿ | PTI
ಹೊಸದಿಲ್ಲಿ, ಆ. 5: ಭಾರತೀಯ ಭೂಭಾಗವನ್ನು ಚೀನಾ ಒತ್ತುವರಿ ಮಾಡಿಕೊಂಡಿದೆ ಎನ್ನಲಾದ ವಿಷಯದ ಬಗ್ಗೆ ಸಂಸದ ರಾಹುಲ್ ಗಾಂಧಿ ಆಡಿರುವ ಮಾತುಗಳಿಗೆ ಸುಪ್ರೀಂ ಕೋರ್ಟ್ ನೀಡಿರುವ ಹೇಳಿಕೆಗಳಿಗೆ ದೇಶಾದ್ಯಂತ ಕಾಂಗ್ರೆಸ್ ನಾಯಕರಿಂದ ಆಕ್ಷೇಪಗಳು ವ್ಯಕ್ತವಾಗಿವೆ.
‘‘ರಾಜಕೀಯ ಪಕ್ಷಗಳ ಪ್ರಜಾಸತ್ತಾತ್ಮಕ ಹಕ್ಕುಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಅನಗತ್ಯವಾಗಿರುವ ಅಸಾಮಾನ್ಯ ಹೇಳಿಕೆಗಳನ್ನು ನೀಡಿದ್ದಾರೆ ಎನ್ನುವುದನ್ನು ‘ಇಂಡಿಯಾ’ ಮೈತ್ರಿಕೂಟದ ಸದಸ್ಯ ಪಕ್ಷಗಳು ಒಪ್ಪಿಕೊಂಡಿವೆ’’ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತೆ ಮಂಗಳವಾರ ಬೆಳಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಸೋಮವಾರ ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣವೊಂದರ ವಿಚಾರಣೆ ನಡೆಸುವ ವೇಳೆ ಸುಪ್ರೀಂ ಕೋರ್ಟ್ ನ್ಯಾಯಾಧೀಶ ದೀಪಂಕರ ದತ್ತ, ‘‘ಚೀನಾವು 2,000 ಚದರ ಕಿ.ಮೀ. ಭಾರತೀಯ ಭೂಭಾಗವನ್ನು ಆಕ್ರಮಿಸಿಕೊಂಡಿದೆ ಎನ್ನುವುದು ನಿಮಗೆ ಹೇಗೆ ಗೊತ್ತು? ನೀವು ಅಲ್ಲಿದ್ದಿರಾ? ನಿಮ್ಮಲ್ಲಿ ವಿಶ್ವಾಸಾರ್ಹ ಪುರಾವೆಯಿದೆಯೇ? ನೀವು ನಿಜವಾದ ಭಾರತೀಯನಾಗಿದ್ದರೆ ಹೀಗೆ ಹೇಳುತ್ತಿರಲಿಲ್ಲ’’ ಎಂದು ಹೇಳಿದ್ದರು.
2020ರ ಗಲ್ವಾನ್ ಘಟನೆಯ ಬಳಿಕ, ಪ್ರತಿಯೊಬ್ಬ ದೇಶಭಕ್ತ ಭಾರತೀಯರು ಚೀನಾ ಬಗ್ಗೆ ಉತ್ತರಗಳನ್ನು ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಹಲವು ಚದರ ಕಿಲೋಮೀಟರ್ ಭಾರತೀಯ ಭೂಭಾಗವು ಚೀನಾದ ನಿಯಂತ್ರಣಕ್ಕೆ ಹೋಗಿದೆ ಎಂಬ ಪತ್ರಿಕಾ ವರದಿಗಳು ಮತ್ತು ಕೆಲವು ಅಧಿಕಾರಿಗಳ ಹೇಳಿಕೆಗಳನ್ನು ಅವರು ಉಲ್ಲೇಖಿಸಿದ್ದಾರೆ. ‘‘ಇದು 1962ರ ಬಳಿಕ, ಭಾರತ ಅನುಭವಿಸಿದ ಅತ್ಯಂತ ದೊಡ್ಡ ಭೂಭಾಗ ನಷ್ಟವಾಗಿದೆ’’ ಎಂದು ಅವರು ಹೇಳಿದರು.
‘‘ಭಾರತೀಯ ಭೂಭಾಗವನ್ನು ಚೀನಾ ಅತಿಕ್ರಮಿಸಿರುವುದು ವಾಸ್ತವವಾಗಿದೆ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಎಕ್ಸ್ನಲ್ಲಿ ಹೇಳಿದ್ದಾರೆ. ‘‘ಯಾವುದೇ ದೇಶಭಕ್ತ ಭಾರತೀಯ ಇದನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘‘ಸರಕಾರವನ್ನು ಪ್ರಶ್ನಿಸಬೇಕೆಂದು ರಾಷ್ಟ್ರೀಯತೆ ಹೇಳುತ್ತದೆ. ಇದು ನಿಂದನೆಯಾದರೆ, ಓರ್ವ ಭಾರತೀಯ ಪ್ರಜೆಯಾಗಿ ನಾನು ಅದನ್ನೇ ಮಾಡುತ್ತೇನೆ, ‘ಮೈ ಲಾರ್ಡ್’’’ ಎಂದು ಅವರು ಹೇಳಿದ್ದಾರೆ.
► ಇದು ನ್ಯಾಯಾಧೀಶರ ಕೆಲಸವಲ್ಲ: ಪ್ರಿಯಾಂಕಾ ಗಾಂಧಿ
ಯಾರು ನಿಜವಾದ ಭಾರತೀಯರು ಎನ್ನುವುದನ್ನು ನಿರ್ಧರಿಸುವ ಕೆಲಸ ನ್ಯಾಯಾಧೀಶಯಾರು ನಿಜವಾದ ಭಾರತೀಯರು ಎನ್ನುವುದನ್ನು ನಿರ್ಧರಿಸುವ ಕೆಲಸ ನ್ಯಾಯಾಧೀಶರ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಹೇಳಿದ್ದಾರೆ.
ನನ್ನ ಸಹೋದರ ರಾಹುಲ್ ಗಾಂಧಿಗೆ ಸೇನೆಯ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದ ವಯನಾಡ್ ಸಂಸದೆ, ಅವರು ಸೇನೆಯ ವಿರುದ್ಧ ಏನೂ ಹೇಳುವುದಿಲ್ಲ ಎಂದರು.
ಸರಕಾರವನ್ನು ಪ್ರಶ್ನಿಸುವುದು ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿಯ ಕೆಲಸವಾಗಿದೆ ಎಂದು ಪ್ರಿಯಾಂಕಾ ಹೇಳಿದರು.







