ಕೆಂಪುಕೋಟೆಯಲ್ಲಿನ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಗೈರಾದ ರಾಹುಲ್ ಗಾಂಧಿ; ಬಿಜೆಪಿ ಟೀಕೆ

ರಾಹುಲ್ ಗಾಂಧಿ | PC : X
ಹೊಸ ದಿಲ್ಲಿ: ಇಂದು (ಶುಕ್ರವಾರ) ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೈರಾಗಿದ್ದು, ಅವರ ಈ ನಡವಳಿಕೆ ನಾಚಿಕೆಗೇಡಿನದ್ದಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಇಂದು ನಡೆದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನಡೆಸಿದರು. ಈ ವೇಳೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗೈರುಹಾಜರಿ ಎದ್ದು ಕಾಣುತ್ತಿತ್ತು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ವಕ್ತಾರ ಶೆಹಝಾದ್ ಪೂನಾವಾಲಾ, “ಇಂದು ಟಿವಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ವಕ್ತಾರರು ಕೆಂಪು ಕೋಟೆಯಲ್ಲಿ ಆಯೋಜನೆಗೊಂಡಿದ್ದ ಸ್ವಾತಂತ್ರ್ಯೋತ್ಸವಕ್ಕೆ ರಾಹುಲ್ ಗಾಂಧಿ ಗೈರಾಗಿದ್ದಾರೆ ಎಂಬುದನ್ನು ದೃಢಪಡಿಸಿದರು. ಇದು ರಾಷ್ಟ್ರೀಯ ಸಂಭ್ರಮಾಚರಣೆಯಾಗಿದ್ದರೂ, ಪಾಕಿಸ್ತಾನ ಪ್ರೇಮಿ ರಾಹುಲ್ ಗಾಂಧಿ ಇದನ್ನು ದೇಶ ಮತ್ತು ಸೇನೆಯ ವಿರೋಧವನ್ನಾಗಿಸಿರುವುದು ನಾಚಿಕೆಗೇಡಿನ ವರ್ತನೆಯಾಗಿದೆ. ಇದು ಸಂವಿಧಾನ ಮತ್ತು ಸೇನೆಯ ಸಮ್ಮಾನವೇ?” ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಈ ನಡುವೆ, ದಿಲ್ಲಿಯ ಇಂದಿರಾ ಭವನ್ ನಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಇನ್ನಿತರ ಹಿರಿಯ ನಾಯಕರೊಂದಿಗೆ ರಾಹುಲ್ ಗಾಂಧಿ ಅವರು ಧ್ವಾಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ರಾಜಧಾನಿ ದಿಲ್ಲಿಯ ಅನೇಕ ಪಕ್ಷದ ಕಾರ್ಯಕರ್ತರು ಹಾಜರಿದ್ದರು.







