2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತಗಳ್ಳತನ ನಡೆಸಿದ್ದರು : ರಾಹುಲ್ ಗಾಂಧಿ ಆರೋಪ

ರಾಹುಲ್ಗಾಂಧಿ | PC : ANI
ಹೊಸದಿಲ್ಲಿ,ಸೆ.20: 2024ರ ಲೋಕಸಭಾಚುನಾವಣೆಯನ್ನು ಗೆಲ್ಲುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮತಗಳ್ಳತನ ನಡೆಸಿದ್ದರು ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ಗಾಂಧಿ ಶನಿವಾರ ಆಪಾದಿಸಿದ್ದಾರೆ.
ಕೇರಳದ ವಯನಾಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘‘ಮತಗಳ್ಳತನ ನಡೆಯುತ್ತಿದೆಯೆಂಬ ಬಗ್ಗೆ ಯಾರೂ ಕೂಡ ಸಂಶಯಪಡದಂತಹ ‘ಹೈಡ್ರೋಜನ್ ಬಾಂಬ್’ ಒಂದನ್ನು ನಾನು ಶೀಘ್ರದಲ್ಲೇ ಬಹಿರಂಗಪಡಿಸಲಿದ್ದು, ಅದು ವಾಸ್ತವ ಸನ್ನಿವೇಶವನ್ನು ಸಂಪೂರ್ಣವಾಗಿ ಬಯಲುಗೊಳಿಸಲಿದೆ’’ ಎಂದರು.
‘‘ನಾವು ಹೇಳುತ್ತಿರುವುದರ ಬಗ್ಗೆ ಬಹಿರಂಗ ಹಾಗೂ ಗೌಪ್ಯ ಪುರಾವೆಗಳೆರಡೂ ಇವೆ. ಈ ಬಗ್ಗೆ ನಾನು ಕರೆದಿದ್ದ ಮೊದಲನೇ ಹಾಗೂ ಎರಡನೇ ಪತ್ರಿಕಾಗೋಷ್ಠಿಗಳನ್ನು ನೀವು ನೋಡಿದ್ದೀರಿ.
ಏನೆಲ್ಲಾ ನಡೆದಿದೆಯೋ ಆ ಬಗ್ಗೆ ನಮ್ಮಲ್ಲಿ 100 ಶೇಕಡ ಪುರಾವೆಯಿದೆ. ಶೀಘ್ರದಲ್ಲಿ ಇವೆಲ್ಲವೂ ಹೊರಬರಲಿವೆ’’ ಎಂದು ರಾಹುಲ್ ಹೇಳಿದ್ದಾರೆ.
ನೀವು ಬಹಿರಂಗಪಡಿಸಲಿರುವ ವಿಷಯವು ಪ್ರಧಾನಿ ಮೋದಿ ಪ್ರತಿನಿಧಿಸುತ್ತಿರುವ ವಾರಣಾಸಿಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ್ದೇ ಎಂಬ ಪತ್ರಕರ್ತರ ಪ್ರಶ್ನೆಗೆ, ರಾಹುಲ್ ಅವರು, ‘‘ ಊಹಿಸುವುದು ಹಾಗೂ ಸಂದೇಹಿಸುವುದು ಮಾಧ್ಯಮಗಳಿಗೆ ಬಿಟ್ಟಿದ್ದು’’ ಎಂದರು.
ಆಳಂದ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಮತಗಳ್ಳತನದ ಆರೋಪಗಳ ಬಗ್ಗೆ ಕರ್ನಾಟಕ ರಾಜ್ಯ ಸಿಐಡಿಯಿಂದ ತನಿಖೆ ನಡೆಯುತ್ತಿದೆ ಎಂದವರು ತಿಳಿಸಿದರು.
ಮಾಹಿತಿ ನೀಡಲು ನಿರಾಕರಿಸಿದ ಚುನಾವಣಾ ಅಯೋಗ
ಆಳಂದ ವಿಧಾನಸಭಾಕ್ಷೇತ್ರದಲ್ಲಿ ಮತಗಳ್ಳತನವನ್ನು ನಡೆಸಲು ಬಳಸಲಾದ ದೂರವಾಣಿ ಸಂಖ್ಯೆಗಳ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡುವಂತೆ ಸಿಐಡಿಯು ಚುನಾವಣಾಆಯೋಗವನ್ನು ಕೋರಿತ್ತು. ಮುಖ್ಯ ಚುನಾವಣಾ ಆಯುಕ್ತರಾದ ಗ್ಯಾನೇಶ್ ಕುಮಾರ್ ಅವರು ಕರ್ನಾಟಕ ಸಿಐಡಿ ಕೋರಿದ್ದ ಮಾಹಿತಿಯನ್ನು ನೀಡುತ್ತಿಲ್ಲ. ಮುಖ್ಯ ಚುನಾವಣಾ ಆಯೋಗದ ವಿರುದ್ಧ ಇದಕ್ಕಿಂತ ದೊಡ್ಡ ಆರೋಪ ಇನ್ನು ಇರಲಾರದು ಎಂದವರು ಹೇಳಿದರು.







