2014ರಿಂದಲೇ ಮತ ಕಳ್ಳತನ ನಡೆಯುತ್ತಿದೆ : ರಾಹುಲ್ ಗಾಂಧಿ ಆರೋಪಕ್ಕೆ ರೈತ ನಾಯಕ ಟಿಕಾಯತ್ ಬೆಂಬಲ

ರಾಕೇಶ್ ಟಿಕಾಯತ್ | PC : ANI
ಬರೇಲಿ, ಸೆ.24: “2014ರ ಚುನಾವಣೆಯಿಂದಲೇ ಬಿಜೆಪಿ ಮತ ಕದಿಯುವ ಮೂಲಕ ಅಧಿಕಾರಕ್ಕೆ ಬಂದಿದೆ. ನಾವು ಇದನ್ನು ಐದು ವರ್ಷಗಳ ಹಿಂದೆಯೇ ಎಚ್ಚರಿಸಿದ್ದೆವು" ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಬರೇಲಿಯ ನೆಹರು ಯುವ ಕೇಂದ್ರದಲ್ಲಿ ಮಂಗಳವಾರ ನಡೆದ ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ಮಾತನಾಡಿದ ಟಿಕಾಯತ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ “ಮತ ಕಳ್ಳತನ” ಆರೋಪಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರ ರೈತರ ಭೂಮಿಯನ್ನು ಬಂಡವಾಳಶಾಹಿಗಳಿಗೆ ಒಪ್ಪಿಸಲು ಬಯಸುತ್ತಿದೆ ಎಂದು ಟಿಕಾಯತ್ ಆರೋಪಿಸಿದ್ದಾರೆ.
ಮಹಾಪಂಚಾಯತ್ ಆಯೋಜನೆಯ ಉದ್ದೇಶ ಸರಕಾರಕ್ಕೆ ಎಚ್ಚರಿಕೆ ನೀಡುವುದು. ಸರಕಾರ ರೈತರ ಭೂಮಿಯ ಮೇಲೆ ಕಣ್ಣು ಹಾಕಿದ್ದು, ಅದನ್ನು ಕಸಿದು ಬಂಡವಾಳಶಾಹಿಗಳಿಗೆ ಒದಗಿಸಲು ಯೋಜಿಸುತ್ತಿದೆ ಎಂದು ಟಿಕಾಯತ್ ಕಳವಳ ವ್ಯಕ್ತಪಡಿಸಿದ್ದಾರೆ.
“ಮತ ಕಳ್ಳತನ ಮುಂದುವರಿದಿರುವವರೆಗೆ ನಿರುದ್ಯೋಗ ಮತ್ತು ಭ್ರಷ್ಟಾಚಾರ ಕಡಿಮೆಯಾಗುವುದಿಲ್ಲ. ಬಿಜೆಪಿ ಪ್ರಾಮಾಣಿಕವಾಗಿ ಗೆಲ್ಲುವುದಿಲ್ಲ – ಮತಗಳನ್ನು ಕದಿಯುವ ಮೂಲಕ ಹಾಗೂ ಸಂಸ್ಥೆಗಳನ್ನು ನಿಯಂತ್ರಿಸುವ ಮೂಲಕವೇ ಅಧಿಕಾರದಲ್ಲಿ ಉಳಿಯುತ್ತದೆ. ಇದರ ಪರಿಣಾಮವಾಗಿ ನಿರುದ್ಯೋಗವು 45 ವರ್ಷಗಳ ಗರಿಷ್ಠ ಮಟ್ಟ ತಲುಪಿದೆ, ಉದ್ಯೋಗ ಅವಕಾಶಗಳು ಕುಸಿದಿವೆ, ನೇಮಕಾತಿ ಪ್ರಕ್ರಿಯೆಗಳು ಭ್ರಷ್ಟಾಚಾರದ ಪಾಲಾಗಿವೆ, ಯುವಕರ ಭವಿಷ್ಯ ಅಪಾಯದಲ್ಲಿದೆ,” ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಆರೋಪಿಸಿದ್ದರು.







