ಕೇರಳ | ರಾಹುಲ್ ಗಾಂಧಿಗೆ ಬಿಜೆಪಿ ಪ್ಯಾನೆಲಿಸ್ಟ್ ನಿಂದ ಜೀವ ಬೆದರಿಕೆ: ಕಾಂಗ್ರೆಸ್ ಖಂಡನೆ

ರಾಹುಲ್ ಗಾಂಧಿ | PTI
ತಿರುವನಂತಪುರಂ: ಶುಕ್ರವಾರ ರಾತ್ರಿ ಸುದ್ದಿ ವಾಹಿನಿಯೊಂದರಲ್ಲಿ ನಡೆದ ಚರ್ಚೆಯ ವೇಳೆ ಬಿಜೆಪಿ ಪ್ಯಾನೆಲಿಸ್ಟ್ ಒಬ್ಬರು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಜೀವ ಬೆದರಿಕೆ ಒಡ್ಡಿರುವುದನ್ನು ಕೇರಳ ಕಾಂಗ್ರೆಸ್ ಖಂಡಿಸಿದೆ.
ಹಿಂಸಾಚಾರ ಪೀಡಿತ ಲಡಾಖ್ ಕುರಿತು ನ್ಯೂಸ್ 18 ಕೇರಳ ಸುದ್ದಿ ವಾಹಿನಿಯಲ್ಲಿ ಹಮ್ಮಿಕೊಳ್ಳಿಲಾಗಿದ್ದ ಚರ್ಚೆಯಲ್ಲಿ ಬಿಜೆಪಿ ಪರವಾಗಿ ಭಾಗವಹಿಸಿದ್ದ ಮಾಜಿ ಎಬಿವಿಪಿ ನಾಯಕ ಪ್ರಿಂಟು ಮಹಾದೇವ್, “ರಾಹುಲ್ ಗಾಂಧಿ ಎದೆಗೆ ಗುಂಡು ಹೊಡೆಯಲಾಗುವುದು” ಎಂದು ಬೆದರಿಕೆ ಒಡ್ಡಿದ್ದರು.
ಈ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸದಸ್ಯ ರಮೇಶ್ ಚೆನ್ನಿತ್ತಲ, “ಪೊಲೀಸರು ಕೂಡಲೇ ಮಹಾದೇವ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು. ಲೋಕಸಭಾ ವಿಪಕ್ಷ ನಾಯಕನ ವಿರುದ್ಧ ಬಿಜೆಪಿಯ ವಕ್ತಾರರೊಬ್ಬರು ಬಹಿರಂಗವಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಆದರೆ, ಪಿಣರಾಯಿ ವಿಜಯನ್ ಅಡಿಯ ಕೇರಳ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಪೊಲೀಸರ ಈ ಹಿಂಜರಿಕೆಯು ಬಿಜೆಪಿ ಮತ್ತು ಸಿಪಿಐ(ಎಂ)ನೊಂದಿಗೆ ಒಳ ಒಪ್ಪಂದವಿರುವುದನ್ನು ತೋರಿಸುತ್ತಿದೆ. ವಿಳಂಬ ಮಾಡದೆ ಮಹಾದೇವ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಮಹಾದೇವ್ ಹೇಳಿಕೆಯನ್ನು ಕೇರಳ ವಿಧಾನಸಭಾ ವಿಪಕ್ಷದ ನಾಯಕ ವಿ.ಡಿ.ಸತೀಶನ್ ಕೂಡಾ ಖಂಡಿಸಿದ್ದು, “ಈ ಬೆದರಿಕೆಯ ಕುರಿತು ಪೊಲೀಸರು ಇದುವರೆಗೂ ಸ್ವಯಂಪ್ರೇರಿತ ಕ್ರಮ ಕೈಗೊಳ್ಳದಿರುವುದು ಆಘಾತಕಾರಿಯಾಗಿದೆ. ಇಂತಹ ಮಾತುಗಳಿಂದ ರಾಹುಲ್ ಗಾಂಧಿಯನ್ನು ಮೌನವಾಗಿಸಲು ಸಾಧ್ಯವಿಲ್ಲ. ಪೊಲೀಸರ ನಿಷ್ಕ್ರಿಯತೆಯು ಪಿಣರಾಯಿ ವಿಜಯನ್ ಸರಕಾರ ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡಿರುವುದನ್ನು ಸೂಚಿಸುತ್ತಿದೆ” ಎಂದು ಟೀಕಿಸಿದ್ದಾರೆ.
“ಅವರಿಗೆ ರಾಹುಲ್ ಗಾಂಧಿಯನ್ನು ಮುಗಿಸುವುದು ಬೇಕಿದೆ. ಆದರೆ, ಭಾರತದ ಪ್ರಜಾಸತ್ತಾತ್ಮಕ ಜನರು ಅದಕ್ಕೆ ಅವಕಾಶ ನೀಡುವುದಿಲ್ಲ. ಅವರು ಕೋಮುವಾದ ಹಾಗೂ ಫ್ಯಾಸಿಸಂ ವಿರುದ್ಧ ಹೋರಾಡುತ್ತಿರುವುದರಿಂದ, ಅವರು ಯಾರ ಎದುರೂ ಶರಣಾಗುವುದಿಲ್ಲ” ಎಂದು ಅವರು ಘೋಷಿಸಿದ್ದಾರೆ.







