ದಿಲ್ಲಿಯಲ್ಲಿ ಮತ ಹಾಕಿದ್ದ ಬಿಜೆಪಿ ನಾಯಕರಿಂದ ಬಿಹಾರದಲ್ಲೂ ಮತದಾನ: ರಾಹುಲ್ ಗಾಂಧಿ ಆರೋಪ

ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ, ನ. 7: ದಿಲ್ಲಿಯಲ್ಲಿ ಮತ ಹಾಕಿರುವ ಬಿಜೆಪಿ ನಾಯಕರು ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲೂ ಮತಗಳನ್ನು ಚಲಾಯಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
ಬಿಹಾರದ ಎರಡನೇ ಹಂತದ ಮತದಾನಕ್ಕೆ ಮುನ್ನ ಬಂಕ ಮತ್ತು ಭಾಗಲ್ಪುರ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ರಾಹುಲ್ ಗಾಂಧಿ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘‘ದಿಲ್ಲಿಯಲ್ಲಿ ಮತಗಳನ್ನು ಹಾಕಿದ್ದ ಬಿಜೆಪಿ ನಾಯಕರು ಬಿಹಾರದ ಮೊದಲ ಹಂತದ ಮತದಾನದಲ್ಲೂ ಮತಗಳನ್ನು ಹಾಕಿದ್ದಾರೆ ಎನ್ನುವುದು ನನಗೆ ನಿನ್ನೆ ತಿಳಿಯಿತು’’ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನೂ ಆಗಿರುವ ಅವರು ಹೇಳಿದರು.
ಭಾಗಲ್ಪುರದಲ್ಲಿ ಮಾತನಾಡಿದ ರಾಹುಲ್, ‘‘ಕೆಲವು ಬಿಜೆಪಿ ನಾಯಕರಿದ್ದಾರೆ. ಅವರು ಉತ್ತರಪ್ರದೇಶದಲ್ಲಿ ವಾಸಿಸುತ್ತಾರೆ ಮತ್ತು ಉತ್ತರಪ್ರದೇಶದಲ್ಲಿ ಮತ ಹಾಕುತ್ತಾರೆ. ಬಳಿಕ, ಅದೇ ವ್ಯಕ್ತಿಗಳು ಹರ್ಯಾಣದಲ್ಲೂ ಮತ ಹಾಕುತ್ತಾರೆ’’ ಎಂದರು.
ಇದಕ್ಕೂ ಮೊದಲು, ಇದೇ ವಿಷಯದಲ್ಲಿ ಆಮ್ ಆದ್ಮಿ ಪಾರ್ಟಿ ಇಂಥದೇ ಆರೋಪಗಳನ್ನು ಮಾಡಿತ್ತು. ರಾಜ್ಯಸಭಾ ಸದಸ್ಯ ರಾಕೇಶ್ ಸಿನ್ಹಾ ಮತ್ತು ದಿಲ್ಲಿ ಬಿಜೆಪಿಯ ಪೂರ್ವಾಂಚಲ ಮೋರ್ಚ ಅಧ್ಯಕ್ಷ ಸಂತೋಷ್ ಓಜಾ ಸೇರಿದಂತೆ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ಮತ ಚಲಾಯಿಸಿದ್ದ ಬಿಜೆಪಿ ನಾಯಕರು ನವೆಂಬರ್ 6ರಂದು ಬಿಹಾರದಲ್ಲೂ ಮತ ಚಲಾಯಿಸಿದ್ದಾರೆ ಎಂದು ಪಕ್ಷ ಹೇಳಿತ್ತು.







