ಶುದ್ಧ ಗಾಳಿಗಾಗಿ ಆಗ್ರಹಿಸಿದ ಪ್ರತಿಭಟನಾಕಾರರ ಬಂಧನ; ನಾಗರಿಕರನ್ನು ಕ್ರಿಮಿನಲ್ ಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದ ರಾಹುಲ್ ಗಾಂಧಿ

ರಾಹುಲ್ ಗಾಂಧಿ | Photo Credit : PTI
ಹೊಸದಿಲ್ಲಿ: ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ವಿರುದ್ಧ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಹಲವ ರನ್ನು ಅನುಮತಿಯಿಲ್ಲದೆ ಗುಂಪುಗೂಡಲಾಗಿದೆ ಎಂಬ ಆರೋಪದ ಮೇಲೆ ಬಂಧಿಸಿರುವ ಸರಕಾರದ ಕ್ರಮವನ್ನು ರವಿವಾರ ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಶುದ್ಧ ಗಾಳಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರನ್ನೇಕೆ ಕ್ರಿಮಿನಲ್ ಗಳಂತೆ ನಡೆಸಿಕೊಳ್ಳಲಾಗಿದೆ?” ಎಂದು ವಾಗ್ದಾಳಿ ನಡೆಸಿದ್ದಾರೆ.
ವಾಯು ಮಾಲಿನ್ಯದ ಕುರಿತು ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ರಾಹುಲ್ ಗಾಂಧಿ, “ಅದರ ಬದಲು ಶುದ್ಧ ಗಾಳಿಗಾಗಿ ಆಗ್ರಹಿಸುತ್ತಿರುವ ನಾಗರಿಕರ ಮೇಲೆ ದಾಳಿ ನಡೆಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
“ಶುದ್ಧ ಗಾಳಿಯ ಹಕ್ಕು ಮೂಲಭೂತ ಮಾನವ ಹಕ್ಕಾಗಿದೆ. ಶಾಂತಿಯುತವಾಗಿ ಪ್ರತಿಭಟನೆಗೆ ನಮ್ಮ ಸಂವಿಧಾನದಲ್ಲಿ ಖಾತ್ರಿ ನೀಡಲಾಗಿದೆ. ಶುದ್ಧ ಗಾಳಿಗಾಗಿ ಆಗ್ರಹಿಸುತ್ತಿರುವ ನಾಗರಿಕರನ್ನೇಕೆ ಕ್ರಿಮಿನಲ್ ಗಳಂತೆ ನಡೆಸಿಕೊಳ್ಳಲಾಗುತ್ತಿದೆ?” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
“ಆದರೆ, ಮತಗಳ್ಳತನದಿಂದ ಅಧಿಕಾರಕ್ಕೆ ಬಂದಿರುವ ಸರಕಾರ ಇದನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ ಅಥವಾ ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನವನ್ನೂ ಮಾಡುತ್ತಿಲ್ಲ” ಎಂದು ಅವರು ಆರೋಪಿಸಿದ್ದಾರೆ.
“ನಾವು ವಾಯು ಮಾಲಿನ್ಯದ ಕುರಿತು ಕ್ರಮ ಕೈಗೊಳ್ಳಬೇಕೇ ಹೊರತು, ಶುದ್ಧ ಗಾಳಿಗಾಗಿ ಆಗ್ರಹಿಸುತ್ತಿರುವ ನಾಗರಿಕರ ಮೇಲೆ ದಾಳಿ ನಡೆಸಕೂಡದು” ಎಂದೂ ಅವರು ಆಗ್ರಹಿಸಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರನ್ನು ಎಳೆದೊಯ್ದು, ಬಸ್ ಒಂದಕ್ಕೆ ತುಂಬಲಾಯಿತು ಎಂದು ಖ್ಯಾತ ಪರಿಸರವಾದಿ ವಿಮ್ಲೆಂದು ಝಾ ಮಾಡಿರುವ ಪೋಸ್ಟ್ ಗೆ ಪ್ರತಿಯಾಗಿ ರಾಹುಲ್ ಗಾಂಧಿ ಎಕ್ಸ್ ನಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ.







