SIR ಸುಧಾರಣೆಯಲ್ಲ, ದಬ್ಬಾಳಿಕೆ: ರಾಹುಲ್ ಗಾಂಧಿ

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ, ನ. 23: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಯಿಂದ ದೇಶಾದ್ಯಂತ ಅವ್ಯವಸ್ಥೆ ತಾಂಡವವಾಡುತ್ತಿದೆ. SIR ಕೆಲಸಕ್ಕೆ ಸಂಬಂಧಿಸಿದ ಒತ್ತಡದಿಂದ 16 ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಗಳು ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಆರೋಪಿಸಿದ್ದಾರೆ.
SIR ದೇಶದಲ್ಲಿ ಅವ್ಯವಸ್ಥೆ ಸೃಷ್ಟಿಸಿದೆ. ಕೇವಲ 3 ವಾರಗಳಲ್ಲಿ 16 ಬಿಎಲ್ಒಗಳು ಹೃದಯಾಘಾತ, ಒತ್ತಡ, ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ SIR ಒಂದು ಸುಧಾರಣೆಯಲ್ಲ, ಬದಲಾಗಿ ದಬ್ಬಾಳಿಕೆ ಎಂದು ಅವರು ಎಕ್ಸ್ನ ಪೋಸ್ಟ್ ನಲ್ಲಿ ಹೇಳಿದ್ದಾರೆ.
SIR ಯೋಜಿತ ತಂತ್ರ. ಈ ಪ್ರಕ್ರಿಯೆಯ ಅಡಿಯಲ್ಲಿ ನಾಗರಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಒತ್ತಡದಿಂದ ಸಂಭವಿಸುವ ಬಿಎಲ್ಒಗಳ ಸಾವುಗಳನ್ನು ಮುಖ್ಯವೆಂದು ಪರಿಗಣಿಸುತ್ತಿಲ್ಲ. ಅಧಿಕಾರದಲ್ಲಿರುವವರನ್ನು ರಕ್ಷಿಸಲು ಪ್ರಜಾಪ್ರಭುತ್ವವನ್ನು ಬಲಿ ಕೊಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಂಚಿಕೊಂಡ ಮಾಧ್ಯಮ ವರದಿಯೊಂದು 6 ರಾಜ್ಯಗಳಲ್ಲಿ 16 ಬಿಎಲ್ಒಗಳು ಸಾವನ್ನಪ್ಪಿದ್ದಾರೆ; ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ತಲಾ ನಾಲ್ವರು, ಪಶ್ಚಿಮಬಂಗಾಳದಲ್ಲಿ ಮೂವರು, ರಾಜಸ್ಥಾನದಲ್ಲಿ ಇಬ್ಬರು ಹಾಗೂ ತಮಿಳುನಾಡು, ಕೇರಳದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಿದೆ.
SIR ಪ್ರಕ್ರಿಯೆ ಪ್ರಸ್ತುತ 9 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿದೆ. ಇದರ ಮೊದಲ ಹಂತವನ್ನು ಬಿಹಾರದಲ್ಲಿ ವಿಧಾನ ಸಭೆ ಚುನಾವಣೆಗೆ ಮುನ್ನ ಅಲ್ಲಿ ನಡೆಸಲಾಗಿತ್ತು.







