ಲೋಕಸಭೆಯಲ್ಲಿ ವಾಯು ಮಾಲಿನ್ಯದ ಕುರಿತು ಧ್ವನಿ ಎತ್ತಿದ ರಾಹುಲ್ ಗಾಂಧಿ; ಚರ್ಚೆಗೆ ಆಗ್ರಹ

ರಾಹುಲ್ ಗಾಂಧಿ | Photo Credit : PTI
ಹೊಸದಿಲ್ಲಿ, ಡಿ. 12: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಶುಕ್ರವಾರ ದೇಶದ ಪ್ರಮುಖ ನಗರಗಳಲ್ಲಿನ ವಾಯು ಮಾಲಿನ್ಯದ ಕುರಿತು ಪ್ರಸ್ತಾವಿಸಿದರು ಹಾಗೂ ಆ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ವಿರೋಧ ಪಕ್ಷ ಹಾಗೂ ಸರಕಾರ ಪರಸ್ಪರ ನಿಂದಿಸದ ರೀತಿಯಲ್ಲಿ ಚರ್ಚೆ ನಡೆಸಬೇಕು. ಪರಸ್ಪರ ನಿಂದಿಸುವ ಬದಲು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಬೇಕು ಎಂದರು.
‘‘ಇದು ಸೈದ್ಧಾಂತಿಕ ವಿಷಯ ಅಲ್ಲ. ವಾಯು ಮಾಲಿನ್ಯ ನಮ್ಮ ಜನರಿಗೆ ಹಾನಿ ಉಂಟು ಮಾಡುತ್ತಿದೆ ಎಂದು ಈ ಸದನದಲ್ಲಿರುವ ಎಲ್ಲರೂ ಒಪ್ಪುತ್ತಾರೆ. ಸಮಸ್ಯೆಯನ್ನು ಪರಿಹರಿಸಲು ನಾವೆಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ರಾಹುಲ್ ಗಾಂಧಿ ಹೇಳಿದರು.
ವಾಯು ಮಾಲಿನ್ಯದ ಸಮಸ್ಯೆ ನಿಭಾಯಿಸಲು ಪ್ರಧಾನಿ ಅವರು ಒಂದು ಯೋಜನೆ ರೂಪಿಸಬಹುದು ಎಂದು ಅವರು ಹೇಳಿದರು.
ಈ ವಿಷಯದ ಕುರಿತು ಚರ್ಚೆ ನಡೆಸಲು ಸರಕಾರ ಸಿದ್ಧವಿತ್ತು. ಲೋಕಸಭೆಯ ಕಲಾಪ ಸಲಹಾ ಸಮಿತಿಯು ಅದಕ್ಕೆ ಸಮಯ ನಿಗದಿಪಡಿಸಬಹುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು.
‘‘ನಮ್ಮ ಹೆಚ್ಚಿನ ಪ್ರಮುಖ ನಗರಗಳು ವಿಷಕಾರಿ ಗಾಳಿಯ ಹೊದಿಕೆಯ ಅಡಿ ಜೀವಿಸುತ್ತಿದೆ. ಲಕ್ಷಾಂತರ ಮಕ್ಕಳು ಶ್ವಾಸಕೋಸದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಅವರ ಭವಿಷ್ಯ ಮಂಕಾಗುತ್ತಿದೆ. ಜನರು ಕಾನ್ಸರ್/ಗೆ ತುತ್ತಾಗುತ್ತಿದ್ದಾರೆ. ವೃದ್ಧರು ಉಸಿರಾಡಲು ಹೋರಾಡುತ್ತಿದ್ದಾರೆ", ಎಂದು
ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.







