ಕಾರ್ಪೊರೇಟ್ ಹಿತಾಸಕ್ತಿಗಾಗಿ ಕೇಂದ್ರದಿಂದ ಎಂನರೇಗಾ ದುರ್ಬಲ: ರಾಹುಲ್ ಗಾಂಧಿ

ರಾಹುಲ್ ಗಾಂಧಿ | Photo Credit : PTI
ಹೊಸದಿಲ್ಲಿ, ಜ. 20: ಗೌತಮ್ ಅದಾನಿ ಹಾಗೂ ಮುಖೇಶ್ ಅಂಬಾನಿಯವರಂತಹ ಉದ್ಯಮಿಗಳ ಹಿತಾಸಕ್ತಿಯನ್ನು ಕಾಪಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂನರೇಗಾ) ಯನ್ನು ದುರ್ಬಲಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.
ತಮ್ಮ ಲೋಕಸಭಾ ಕ್ಷೇತ್ರವಾದ ಉತ್ತರಪ್ರದೇಶದ ರಾಯ್ ಬರೇಲಿಗೆ ಭೇಟಿ ನೀಡಿದ ಸಂದರ್ಭ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅಧಿಕಾರವನ್ನು ಕೇಂದ್ರೀಕರಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂನರೇಗಾ)ಯ ಹೆಸರನ್ನು ಬದಲಾಯಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಹಾತ್ಮಾ ಗಾಂಧಿಗೆ ಅವಮಾನ ಮಾಡಿದೆ. ಜೊತೆಗೆ ದುರ್ಬಲ ವರ್ಗಗಳಿಗೆ ಒದಗಿಸಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿದೆ ಎಂದು ಅವರು ಹೇಳಿದರು.
ಈ ಕ್ರಮವನ್ನು ಪ್ರಜಾಪ್ರಭುತ್ವದ ಬೇರುಗಳ ಮೇಲಿನ ದಾಳಿ ಎಂದು ರಾಹುಲ್ ಗಾಂಧಿ ವ್ಯಾಖ್ಯಾನಿಸಿದರು.
ಎಂನರೇಗಾವನ್ನು ರಕ್ಷಿಸಲು ಕಾಂಗ್ರೆಸ್ ದೇಶವ್ಯಾಪಿ ಚಳುವಳಿ ನಡೆಸುತ್ತಿದೆ. ನಾವು ಕಾರ್ಮಿಕರ ಬೆಂಬಲಕ್ಕೆ ನಿಂತಿದ್ದು, ಅವರ ಹಕ್ಕುಗಳನ್ನು ರಕ್ಷಿಸಲು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು.
ದೇಶದ ಸಂಪತ್ತು ಗೌತಮ್ ಅದಾನಿ ಹಾಗೂ ಮುಖೇಶ್ ಅಂಬಾನಿಯವರಂತಹ ಕೈಗಾರಿಕೋದ್ಯಮಿಗಳ ಕೈಯಲ್ಲಿ ಕೇಂದ್ರೀಕೃತವಾಗಿರಬೇಕು ಎಂದು ಪ್ರಧಾನಿ ಬಯಸುತ್ತಾರೆ. ಒಂದೆಡೆ ನಾವು ಜನರನ್ನು ರಕ್ಷಿಸುತ್ತಿದ್ದೇವೆ; ಇನ್ನೊಂದೆಡೆ ನರೇಂದ್ರ ಮೋದಿ ಅವರು ದೇಶದ ಸಂಪೂರ್ಣ ಸಂಪತ್ತನ್ನು ಆಯ್ದ ಕೆಲವರಿಗೆ ವರ್ಗಾಯಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.







