ಕೇಂದ್ರವು ಮನರೇಗಾ ರದ್ದತಿಯೊಂದಿಗೆ ಕೃಷಿ ಕಾನೂನುಗಳ ತಪ್ಪನ್ನು ಪುನರಾವರ್ತಿಸಲು ಬಯಸುತ್ತಿದೆ: ರಾಹುಲ್ ಗಾಂಧಿ

Photo Credit : PTI
ಹೊಸದಿಲ್ಲಿ,ಜ.22: ಮನರೇಗಾದ ಬದಲಿಗೆ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ತರುವ ಮೋದಿ ಸರಕಾರದ ನಿರ್ಧಾರವನ್ನು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನೂತನ ಕಾಯ್ದೆಯನ್ನು ಈಗ ರದ್ದುಗೊಂಡಿರುವ ಕೃಷಿ ಕಾನೂನುಗಳಿಗೆ ಹೋಲಿಸಿದರು.
ರಚನಾತ್ಮಕ್ ಕಾಂಗ್ರೆಸ್ ಆಯೋಜಿಸಿದ್ದ ರಾಷ್ಟ್ರೀಯ ಮನರೇಗಾ ಕಾರ್ಮಿಕರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನೂತನ ಕಾಯ್ದೆಯ ವಿರುದ್ಧ ಒಗ್ಗಟ್ಟಾಗುವಂತೆ ಕಾರ್ಮಿಕರು ಮತ್ತು ಬಡ ನಾಗರಿಕರನ್ನು ಆಗ್ರಹಿಸಿದರು.
ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಬಡವರಿಗೆ ದುಡಿಯುವ ಖಚಿತ ಹಕ್ಕನ್ನು ಒದಗಿಸುವುದು ಮತ್ತು ತನ್ಮೂಲಕ ಅವರ ಸಬಲೀಕರಣ ಮನರೇಗಾದ ಉದ್ದೇಶವಾಗಿತ್ತು,ಆದರೆ ಬಿಜೆಪಿ ಆ ಪರಿಕಲ್ಪನೆಯನ್ನು ಅಂತ್ಯಗೊಳಿಸಲು ಬಯಸಿದೆ ಎಂದು ಹೇಳಿದರು.
ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ,‘ನಾವೆಲ್ಲರೂ ಒಗ್ಗಟ್ಟಾಗಿ ಆ ಕಾನೂನುಗಳು ರದ್ದುಗೊಳ್ಳುವಂತೆ ಮಾಡಿದ್ದೆವು. ಈಗ ಸರಕಾರವು ಕಾರ್ಮಿಕರ ವಿಷಯದಲ್ಲಿಯೂ ಅಂತಹುದೇ ಕಾನೂನುಗಳನ್ನು ತರುವ ಪ್ರಯತ್ನವನ್ನು ಮಾಡುತ್ತಿದೆ’ ಎಂದರು.
ನಿರ್ಧಾರ ಕೈಗೊಳ್ಳುವುದನ್ನು ಕೇಂದ್ರೀಕರಿಸಿದ್ದಕ್ಕಾಗಿ ನೂತನ ಕಾನೂನನ್ನು ಟೀಕಿಸಿದ ಅವರು, ಬಿಜೆಪಿ ಆಡಳಿತದ ರಾಜ್ಯಗಳು ಆದ್ಯತೆಯ ನಿಧಿ ಹಂಚಿಕೆಗಳನ್ನು ಪಡೆಯಲಿವೆ ಎಂದು ಆರೋಪಿಸಿದರು. ಈ ಹಿಂದೆ ಕಾರ್ಮಿಕರಿಗೆ ಲಭಿಸುತ್ತಿದ್ದ ಲಾಭಗಳನ್ನು ಈಗ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ವರ್ಗಾಯಿಸಬಹುದು ಎಂದು ಎಚ್ಚರಿಕೆ ನೀಡಿದ ಅವರು, ಸಂಪತ್ತು ಕೆಲವೇ ಜನರ ಬಳಿ ಕೇಂದ್ರೀಕೃತವಾಗಿರುವುದು ಮತ್ತು ಬಡವರು ಕಾರ್ಪೊರೇಟ್ ದೈತ್ಯರನ್ನು ಅವಲಂಬಿಸಿರುವುದು; ಇದು ಅವರ ಭಾರತದ ಮಾದರಿಯಾಗಿದೆ ಎಂದರು.
ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಹಿಂದೆಗೆದುಕೊಳ್ಳಬೇಕು. ಹಕ್ಕು ಆಧಾರಿತ ಯೋಜನೆಯಾಗಿ ಮನರೇಗಾವನ್ನು ಮರುಜಾರಿಗೊಳಿಸಬೇಕು ಮತ್ತು ಪಂಚಾಯತ್ಗಳ ಅಧಿಕಾರವನ್ನು ಮರುಸ್ಥಾಪಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಜ.10ರಿಂದ 45 ದಿನಗಳ ರಾಷ್ಟ್ರವ್ಯಾಪಿ ‘ಮನರೇಗಾ ಬಚಾವೊ ಸಂಗ್ರಾಮ್’ ಅಭಿಯಾನವನ್ನು ನಡೆಸುತ್ತಿದೆ.







