ಅಮೆರಿಕ ಜವಳಿ ಮೇಲೆ ಶೇ.50ರಷ್ಟು ಸುಂಕ ವಿಧಿಸಿರುವುದಕ್ಕೆ ಪ್ರಧಾನಿ ಮೋದಿ ಹೊಣೆ: ರಾಹುಲ್ ಗಾಂಧಿ

ರಾಹುಲ್ ಗಾಂಧಿ | Photo Credit : PTI
ಹೊಸದಿಲ್ಲಿ,ಜ.23: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತನ್ನ ‘ಸತ್ತ ಆರ್ಥಿಕತೆ’ ದಾಳಿಯನ್ನು ಶುಕ್ರವಾರ ಪುನರಾರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅಮೆರಿಕದ ಭಾರೀ ಸುಂಕಗಳು ಭಾರತದ ಜವಳಿ ಕ್ಷೇತ್ರದ ಬೀರಿರುವ ಪ್ರತಿಕೂಲ ಪರಿಣಾಮವನ್ನು ಉಲ್ಲೇಖಿಸಿದ್ದಾರೆ. ಉದ್ಯೋಗ ನಷ್ಟ ಮತ್ತು ರಫ್ತುದಾರರಿಗೆ ಎದುರಾಗಿರುವ ಹೆಚ್ಚುತ್ತಿರುವ ಅನಿಶ್ಚಿತತೆಗಳ ನಡುವೆ ಸರಕಾರದ ನಿಷ್ಕ್ರಿಯತೆಯನ್ನು ಆರೋಪಿಸಿರುವ ಅವರು, ಇದಕ್ಕಾಗಿ ಮೋದಿಯವರನ್ನು ಹೊಣೆಯಾಗಿಸಿದ್ದಾರೆ.
‘ಅಮೆರಿಕದ ಶೇ.50ರಷ್ಟು ಸುಂಕಗಳು ಮತ್ತು ಅನಿಶ್ಚಿತತೆ ಭಾರತದ ಜವಳಿ ರಫ್ತುದಾರರನ್ನು ತೀವ್ರವಾಗಿ ಬಾಧಿಸುತ್ತಿವೆ. ಉದ್ಯೋಗ ನಷ್ಟಗಳು, ಫ್ಯಾಕ್ಟರಿಗಳ ಮುಚ್ಚುವಿಕೆಗಳು ಮತ್ತು ತಗ್ಗಿದ ಬೇಡಿಕೆಗಳು ನಮ್ಮ ‘ಸತ್ತ ಆರ್ಥಿಕತೆ’ಯ ವಾಸ್ತವವಾಗಿವೆ’ ಎಂದು ರಾಹುಲ್ ಎಕ್ಸ್ಪೋಸ್ಟ್ನಲ್ಲಿ ಬರೆದಿದ್ದಾರೆ.
ಮೋದಿಯವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಅವರು, ತೀವ್ರ ಪರಿಣಾಮದ ಹೊರತಾಗಿಯೂ ಸರಕಾರವು ಬಿಕ್ಕಟ್ಟಿಗೆ ಸ್ಪಂದಿಸುವಲ್ಲಿ ವಿಫಲಗೊಂಡಿದೆ ಎಂದು ಆರೋಪಿಸಿದ್ದಾರೆ.
4.5 ಕೋಟಿಗೂ ಅಧಿಕ ಉದ್ಯೋಗಗಳು ಮತ್ತು ಲಕ್ಷಾಂತರ ಉದ್ಯಮಗಳು ಅಪಾಯದಲ್ಲಿದ್ದರೂ ಮೋದಿ ಯಾವುದೇ ಪರಿಹಾರವನ್ನು ನೀಡಿಲ್ಲ,ಅವರು ಸುಂಕಗಳ ಬಗ್ಗೆ ಮಾತೇ ಆಡಲಿಲ್ಲ. ಮೋದಿಜಿ, ನೀವೇ ಹೊಣೆಯಾಗಿದ್ದೀರಿ, ದಯವಿಟ್ಟು ಈ ವಿಷಯದ ಬಗ್ಗೆ ನಿಮ್ಮ ಗಮನ ಹರಿಸಿ ಎಂದು ವಿಪಕ್ಷ ನಾಯಕ ರಾಹುಲ್ ಬರೆದಿದ್ದಾರೆ.
ಈ ಹಿಂದೆ ಭಾರತದ ಆರ್ಥಿಕತೆಯ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೀಕ್ಷ್ಣ ಟೀಕೆಯನ್ನು ಪ್ರತಿಧ್ವನಿಸಿದ್ದ ರಾಹುಲ್, ಭಾರತದ ಆರ್ಥಿಕತೆಯು ಸತ್ತಿದೆ ಮತ್ತು ಈ ಸ್ಥಿತಿಗೆ ಮೋದಿ ಸರಕಾರದ ನೀತಿಗಳೇ ಕಾರಣ ಎಂದು ಹೇಳಿದ್ದರು.







