ರಾಜಿ ಮಾಡಿಕೊಂಡಿರುವ ವ್ಯಕ್ತಿಯ ಬಾಹ್ಯ ಒತ್ತಡದ ನಿರ್ಧಾರಗಳೇ ಭಾರತದ ವಿದೇಶಾಂಗ ನೀತಿ : ರಾಹುಲ್ ಗಾಂಧಿ ಟೀಕೆ

ರಾಹುಲ್ ಗಾಂಧಿ | Photo Credit : PTI
ಹೊಸದಿಲ್ಲಿ, ಮಾ. 6: ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ರಾಜಿ ಮಾಡಿಕೊಂಡಿರುವ ವ್ಯಕ್ತಿಯೋರ್ವ ಬಾಹ್ಯ ಒತ್ತಡಕ್ಕೆ ಒಳಗಾಗಿ ತೆಗದುಕೊಳ್ಳುವ ನಿರ್ಧಾರಗಳೇ ಈಗಿನ ಭಾರತದ ವಿದೇಶ ನೀತಿಯಾಗಿದೆ ಎಂದು ಹೇಳಿದ್ದಾರೆ.
ರಶ್ಯ ತೈಲವನ್ನು ಖರೀದಿಸಲು ಭಾರತೀಯ ತೈಲ ಶುದ್ಧೀಕರಣ ಘಟಕಗಳಿಗೆ ಅಮೆರಿಕವು ತಾತ್ಕಾಲಿಕ ಅನುಮೋದನೆ ನೀಡಿದ ಬಳಿಕ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ರಾಜತಾಂತ್ರಿಕ ಚಟುವಟಿಕೆಗಳು ನಿರಂತರವಾಗಿ ಕ್ಷೀಣಿಸುತ್ತಿರುವುದನ್ನು ಮತ್ತು ಸರಕಾರದ ವಿದೇಶ ನೀತಿಯನ್ನು ಖಂಡಿಸಿ ಕಾಂಗ್ರೆಸ್ ಮತ್ತು ಅದರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತ್ಯೇಕ ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಹಾಕಿದ್ದಾರೆ.
‘‘ಭಾರತೀಯ ವಿದೇಶ ನೀತಿಯು ನಮ್ಮ ಜನರ ಸಾಮೂಹಿಕ ಇಚ್ಛೆಯಾಗಿದೆ. ನಮ್ಮ ವಿದೇಶ ನೀತಿಗೆ ನಮ್ಮ ಇತಿಹಾಸ, ನಮ್ಮ ಭೂಗೋಳ ಹಾಗೂ ಸತ್ಯ ಮತ್ತು ಅಹಿಂಸೆ ಆಧಾರಿತ ನಮ್ಮ ಆಧ್ಯಾತ್ಮಿಕ ಮೌಲ್ಯಗಳು ಆಧಾರವಾಗಿರಬೇಕು’’ ಎಂದು ರಾಹುಲ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶದಲ್ಲಿ ಹೇಳಿದ್ದಾರೆ.
‘‘ಆದರೆ, ನಾವು ಇಂದು ನೋಡುತ್ತಿರುವುದು ವಿದೇಶ ನೀತಿಯಲ್ಲ. ಅದು ರಾಜಿ ಮಾಡಿಕೊಂಡಿರುವ ವ್ಯಕ್ತಿಯೊಬ್ಬ ಒತ್ತಡಕ್ಕೊಳಗಾಗಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಾಗಿವೆ’’ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಹೇಳಿದರು.
ಫೆಬ್ರವರಿ 11ರಂದು ಬಜೆಟ್ ಕುರಿತ ಚರ್ಚೆಯ ವೇಳೆ ತಾನು ಲೋಕಸಭೆಯಲ್ಲಿ ಮಾಡಿದ ಭಾಷಣವನ್ನೂ ಅವರು ಈ ಸಂದೇಶದ ಜೊತೆಗೆ ಹಂಚಿಕೊಂಡಿದ್ದಾರೆ. ಭಾರತದ ಇಂಧನ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬುದಾಗಿ ಅವರು ತನ್ನ ಭಾಷಣದಲ್ಲಿ ಹೇಳಿದ್ದರು. ‘‘ನಾವು ಯಾರಿಂದ ತೈಲ ಖರೀದಿಸಬೇಕು ಅಥವಾ ಖರೀದಿಸಬಾರದು ಎನ್ನುವುದನ್ನು ಅಮೆರಿಕ ನಮಗೆ ಹೇಳುತ್ತದೆ. ರಶ್ಯದಿಂದ ಖರೀದಿಸಬೇಕೇ, ಇರಾನ್ನಿಂದ ಖರೀದಿಸಬೇಕೇ ಅಥವಾ ಖರೀದಿಸಬಾರದೇ ಎನ್ನುವುದನ್ನು ಅಮೆರಿಕ ನಿರ್ಧರಿಸುತ್ತದೆ. ಅದನ್ನು ನಮ್ಮ ಪ್ರಧಾನಿ ನಿರ್ಧರಿಸುವುದಿಲ್ಲ’’ ಎಂದು ರಾಹುಲ್ ಹೇಳಿದ್ದರು.
‘‘ಅದಕ್ಕೆ ಪುರಾವೆ ಈಗ ನಮ್ಮೆದುರಿಗೆ ಇದೆ. ಈ ವಿಷಯದಲ್ಲಿ ನಮ್ಮ ರಾಜಿ ಮಾಡಿಕೊಂಡ ಪ್ರಧಾನಿಯ ಮೌನವು ನಾಚಿಕೆಗೇಡಿನ ಸಂಗತಿಯಾಗಿದೆ’’ ಎಂದು ಅವರು ತನ್ನ ಸಂದೇಶದಲ್ಲಿ ಬರೆದಿದ್ದಾರೆ.
ಮೋದಿಗೆ ಬ್ಲ್ಯಾಕ್ಮೇಲ್: ಖರ್ಗೆ
ಭಾರತದ ರಕ್ಷಣಾ ಸ್ವಾಯತ್ತೆ ಮತ್ತು ರಾಷ್ಟ್ರೀಯ ಸಮಗ್ರತೆಯು ತೀವ್ರ ಬೆದರಿಕೆಗೆ ಒಳಗಾಗಿದೆ, ಯಾಕೆಂದರೆ, ಎಪ್ಸ್ಟೀನ್ ಫೈಲ್ಗಳು ಮತ್ತು ಅದಾನಿ ವಿರುದ್ಧದ ಮೊಕದ್ದಮೆಯನ್ನು ಇಟ್ಟುಕೊಂಡು ಪ್ರಧಾನಿ ಮೋದಿಯನ್ನು ಅಮೆರಿಕವು ಬ್ಲ್ಯಾಕ್ಮೇಲ್ ಮಾಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
30 ದಿನಗಳ ಕಾಲ ರಶ್ಯದಿಂದ ತೈಲ ಖರೀದಿಸಲು ಅಮೆರಿಕವು ಭಾರತಕ್ಕೆ ‘‘ಅನುಮೋದನೆ’’ ನೀಡಿರುವುದು, ಮೋದಿ ಸರಕಾರವು ನಿರಂತರವಾಗಿ ಅಮೆರಿಕದ ಗುಲಾಮನಾಗಿ ಕೆಲಸ ಮಾಡುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿದೆ ಎಂದು ಹೇಳಿದರು.
‘‘ಅಮೆರಿಕ ಬಳಸಿರುವ ಭಾಷೆಯು ನಿರ್ಬಂಧಗಳಿಗೆ ಒಳಗಾದ ದೇಶಗಳಿಗೆ ಬಳಸುವ ಭಾಷೆಯಾಗಿದೆ, ಭಾರತಕ್ಕೆ ಅಲ್ಲ. ಭಾರತವು ಜಾಗತಿಕ ವ್ಯವಸ್ಥೆಯಲ್ಲಿ ಜವಾಬ್ದಾರಿಯುತ ಮತ್ತು ಸಮಾನ ಪಾಲುದಾರನಾಗಿದೆ’’ ಎಂದು ಕಾಂಗ್ರೆಸ್ ಮುಖ್ಯಸ್ಥರು ತನ್ನ ಸಂದೇಶದಲ್ಲಿ ಹೇಳಿದ್ದಾರೆ.







