ಭಾರತದಲ್ಲಿ ಚುನಾವಣಾ ವ್ಯವಸ್ಥೆ ಸತ್ತುಹೋಗಿದೆ: ರಾಹುಲ್ ಗಾಂಧಿ
"15 ಸ್ಥಾನಗಳಲ್ಲಿ ಅಕ್ರಮ ನಡೆಸದಿದ್ದರೆ, ಮೋದಿ ಭಾರತದ ಪ್ರಧಾನಿಯಾಗುತ್ತಿರಲಿಲ್ಲ"

ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ: ಶನಿವಾರ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹಾಗೂ ದೇಶದಲ್ಲಿನ ಚುನಾವಣಾ ಪ್ರಕ್ರಿಯೆ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, “2024ರ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆಸಲಾಗಿದೆ” ಎಂದು ಗಂಭೀರ ಆರೋಪ ಮಾಡಿದರು.
ದಿಲ್ಲಿಯಲ್ಲಿ ಆಯೋಜನೆಗೊಂಡಿದ್ದ ವಾರ್ಷಿಕ ಕಾನೂನು ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, “ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೇಗೆ ಅಕ್ರಮ ಮಾಡಬಹುದು ಹಾಗೂ ಮಾಡಲಾಗಿದೆ ಎಂಬುದನ್ನು ನಾವು ನಿಮಗೆ ತೋರಿಸಲಿದ್ದೇವೆ” ಎಂದು ಘೋಷಿಸಿದರು.
ಭಾರತದ ಚುನಾವಣಾ ವ್ಯವಸ್ಥೆ ಕುಸಿದು ಬಿದ್ದಿದೆ ಎಂದೂ ಆರೋಪಿಸಿದ ಅವರು, “ಸತ್ಯವೇನೆಂದರೆ, ಭಾರತದಲ್ಲಿನ ಚುನಾವಣಾ ವ್ಯವಸ್ಥೆ ಅದಾಗಲೇ ಸತ್ತಿದೆ. ಭಾರತದ ಪ್ರಧಾನಿಯು ತೀರಾ ಕಡಿಮೆ ಬಹುಮತ ಹೊಂದಿರುವ ಪ್ರಧಾನಿಯಾಗಿದ್ದಾರೆ. ಒಂದು ವೇಳೆ 15 ಸ್ಥಾನಗಳಲ್ಲಿ ಅಕ್ರಮ ಮಾಡದೆ ಇದ್ದಿದ್ದರೆ, ಅವರು ಭಾರತದ ಪ್ರಧಾನಿಯಾಗುತ್ತಿರಲಿಲ್ಲ” ಎಂದು ಟೀಕಾಪ್ರಹಾರ ನಡೆಸಿದರು.
ಚುನಾವಣಾ ಆಯೋಗವು ಬಿಜೆಪಿಗೆ ಲಾಭ ಮಾಡಿಕೊಡಲು ಮತಗಳ್ಳತನದಲ್ಲಿ ಭಾಗಿಯಾಗಿದೆ ಎಂದು ಅವರು ಆರೋಪಿಸಿದ ಬೆನ್ನಿಗೇ, ಅವರು ಈ ಟೀಕಾಪ್ರಹಾರ ನಡೆಸಿದ್ದಾರೆ.
ಚುನಾವಣಾ ಅಕ್ರಮದ ಬಗ್ಗೆ ನಮ್ಮ ಬಳಿ ಶೇ. 100ರಷ್ಟು ಸಾಕ್ಷ್ಯಾಧಾರಗಳಿದ್ದು, ಇದು ಅಣು ಬಾಂಬ್ ನಂತಹ ಸತ್ಯವಾಗಿದೆ ಎಂದು ಅವರು ಇದೇ ವೇಳೆ ಸ್ಫೋಟಕ ಹೇಳಿಕೆ ನೀಡಿದ್ದರು.
ಬಿಹಾರದಲ್ಲಿನ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಕುರಿತೂ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಾಹುಲ್ ಗಾಂಧಿ, “ಮತಗಳನ್ನು ಕದಿಯಲಾಗಿದೆ. ಚುನಾವಣಾ ಆಯೋಗವು ಮತಗಳ್ಳತನದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮ ಬಳಿ ಶೇ. 100ರಷ್ಟು ಸಾಕ್ಷ್ಯಾಧಾರಗಳಿವೆ. ನಾನಿದನ್ನು ಸುಮ್ಮನೆ ಹೇಳುತ್ತಿಲ್ಲ. ನಾನು ಶೇ. 100ರಷ್ಟು ಸಾಕ್ಷ್ಯಾಧಾರಗಳೊಂದಿಗೆ ಮಾತನಾಡುತ್ತಿದ್ದೇನೆ. ನಾವಿದನ್ನು ಬಹಿರಂಗಗೊಳಿಸಿದಾಗ, ಚುನಾವಣಾ ಆಯೋಗವು ಮತಗಳ್ಳತನಕ್ಕೆ ನೆರವು ಒದಗಿಸುತ್ತಿದೆ ಎಂಬ ಸತ್ಯ ಇಡೀ ದೇಶಕ್ಕೇ ತಿಳಿಯಲಿದೆ. ಅವರದನ್ನು ಯಾರಿಗಾಗಿ ಮಾಡುತ್ತಿದ್ದಾರೆ? ಅವರದನ್ನು ಬಿಜೆಪಿಗಾಗಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದರು.







