ಡೊನಾಲ್ಡ್ ಟ್ರಂಪ್ಗೆ ಮೋದಿ ತಲೆಬಾಗಲಿದ್ದಾರೆ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ
ಹೊಸದಿಲ್ಲಿ : ʼಡೊನಾಲ್ಡ್ ಟ್ರಂಪ್ಗೆ ಮೋದಿ ತಲೆಬಾಗಲಿದ್ದಾರೆʼ ಎಂದು ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತ ಅಮೆರಿಕದೊಂದಿಗಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದವನ್ನು ಸಂಪೂರ್ಣವಾಗಿ ಅಂತಿಮಗೊಳಿಸಿದಾಗ ಮತ್ತು ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ಮಾತ್ರ ಒಪ್ಪಿಕೊಳ್ಳಲಾಗುತ್ತದೆ. ರಾಷ್ಟ್ರೀಯ ಹಿತಾಸಕ್ತಿ ಯಾವಾಗಲೂ ಮುಖ್ಯವಾಗಿರಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ಒಪ್ಪಂದ ಮಾಡಿಕೊಂಡರೆ, ಭಾರತ ಯಾವಾಗಲೂ ಅಭಿವೃದ್ಧಿ ಹೊಂದಿದ ದೇಶಗಳ ಜೊತೆ
ವ್ಯವಹರಿಸಲು ಸಿದ್ಧವಾಗಿರುತ್ತದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿಕೊಂಡಿದ್ದರು.
ಎರಡೂ ಕಡೆಯವರು ಲಾಭ ಪಡೆದು ಪರಸ್ಪರ ಲಾಭದಾಯಕ ಒಪ್ಪಂದ ಮಾಡಿಕೊಂಡಾಗ ಮಾತ್ರ ಮುಕ್ತ ವ್ಯಾಪಾರ ಒಪ್ಪಂದಗಳು ಸಾಧ್ಯ ಎಂದು ಅಮೆರಿಕದೊಂದಿಗಿನ ಪ್ರಸ್ತಾವಿತ ಮಧ್ಯಂತರ ವ್ಯಾಪಾರ ಒಪ್ಪಂದದ ಬಗ್ಗೆ ಅವರು ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಪಿಯೂಷ್ ಗೋಯಲ್ ಎಷ್ಟು ಬೇಕಾದರೂ ಎದೆ ಬಡಿದುಕೊಳ್ಳಬಹುದು. ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮೋದಿ ಟ್ರಂಪ್ ಸುಂಕದ ಗಡುವಿಗೆ ಸೌಮ್ಯವಾಗಿ ತಲೆಬಾಗುತ್ತಾರೆ ಎಂದು ಹೇಳಿದ್ದಾರೆ.
ಇದಲ್ಲದೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಾನೇ ನಿಲ್ಲಿಸಿದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಿರುವುದನ್ನು ವಿರೋಧಿಸದೆ ಮೌನವಾಗಿರುವುದಕ್ಕಾಗಿ ಕಾಂಗ್ರೆಸ್ ಪ್ರಧಾನಿಯ ವಿರುದ್ಧ ವಾಗ್ಧಾಳಿ ಮುಂದುವರಿಸಿದೆ.
ಟ್ರಂಪ್ ಅವರು ಭಾರತದೊಂದಿಗಿನ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಜುಲೈ 9ರವರೆಗೆ ಗಡುವನ್ನು ನಿಗದಿಪಡಿಸಿದ್ದರು.