ಬಿಹಾರ ಚುನಾವಣೆಯಲ್ಲೂ ಮತಗಳ್ಳತನ, ಮುಖ್ಯ ಚುನಾವಣಾ ಆಯುಕ್ತ ದೋಷಿ: ರಾಹುಲ್ ಗಾಂಧಿ ಗಂಭೀರ ಆರೋಪ

ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಮತಗಳ್ಳತನ ನಡೆದಿರುವ ಬಗ್ಗೆ ವರದಿಗಳು ಬಂದಿವೆ. ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಪ್ರಜಾಪ್ರಭುತ್ವದ ಕೊಲೆಯ ಪ್ರಮುಖ ಅಪರಾಧಿಗಳು. ಇವರು ಸಂವಿಧಾನಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಹಲವು ರಾಜ್ಯಗಳಲ್ಲಿ ಹಿಂದಿನ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದ ಬಿಜೆಪಿಯ ಕೆಲವು ನಾಯಕರು ಮತ್ತು ಕಾರ್ಯಕರ್ತರು ಬಿಹಾರದಲ್ಲಿಯೂ ಮತ ಹಾಕಿದ್ದಾರೆ. ಮತದಾನದ ಹಕ್ಕನ್ನು ರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡವರೇ ಜನರ ಭವಿಷ್ಯವನ್ನು ಕದಿಯುವಲ್ಲಿ ಪಾಲುದಾರಿಕೆ ವಹಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಪ್ರೀತಿಯ ಯುವ ಹಾಗೂ ಜೆನ್ ಝೀ ಸ್ನೇಹಿತರೇ, ಮತಗಳ್ಳತನದ ಮೂಲಕ ಹರ್ಯಾಣದಲ್ಲಿ ಹೇಗೆ ಸರಕಾರ ರಚಿಸಲಾಯಿತು? ಇಡೀ ರಾಜ್ಯದ ಸಾರ್ವಜನಿಕರ ಅಭಿಪ್ರಾಯವನ್ನು ಹೇಗೆ ಕಸಿಯಲಾಯಿತು ಎಂಬುದನ್ನು ನಿನ್ನೆಯಷ್ಟೇ ಸಾಕ್ಷಿ ಸಹಿತ ನಿಮ್ಮ ಮುಂದಿಟ್ಟಿದ್ದೆ. ಎಸ್ಐಆರ್ ಮೂಲಕ ಮತದಾರರ ಪಟ್ಟಿಯನ್ನು ವ್ಯಾಪಕವಾಗಿ ತಿರುಚಲಾಗುತ್ತದೆ ಎಂಬ ಬಗ್ಗೆ ಜಾಗೃತಿ ಮೂಡಿಸಲು ಕೆಲವು ದಿನಗಳ ಹಿಂದೆ ಬಿಹಾರದಲ್ಲಿ 'ವೋಟರ್ ಅಧಿಕಾರ ಯಾತ್ರೆ' ನಡೆಸಿದ್ದೆ. ಇಂದು ಬಿಹಾರದ ಮೂಲೆ ಮೂಲೆಗಳಿಂದ ಬರುತ್ತಿರುವ ಸುದ್ದಿಗಳು ಮತ್ತು ವೀಡಿಯೊಗಳು ಮತಗಳ್ಳತನದ ಸಾಕ್ಷ್ಯಗಳನ್ನು ಮತ್ತಷ್ಟು ಬಲಪಡಿಸಿವೆ ಎಂದು ಅವರು ಹೇಳಿದ್ದಾರೆ.
ಲಕ್ಷಾಂತರ ಮತದಾರರನ್ನು ಈಗಾಗಲೇ ಮತದಾರರ ಪಟ್ಟಿಯಿಂದ ಡಿಲಿಟ್ ಮಾಡಲಾಗಿದೆ. ಈಗ ಜನರು ಮತಗಟ್ಟೆಗಳಲ್ಲಿ ಮತ ಚಲಾಯಿಸುವುದನ್ನು ತಡೆಯಲಾಗುತ್ತಿದೆ. ಮತ ಕಳ್ಳತನದ ಮೂಲಕ ರಚನೆಯಾದ ಸರಕಾರ ಎಂದಿಗೂ ಸಾರ್ವಜನಿಕರ ಹಿತಾಸಕ್ತಿಗಾಗಿ ಕೆಲಸ ಮಾಡುವುದಿಲ್ಲ ಎಂಬುದನ್ನು ನೆನಪಿಡಿ ಎಂದು ರಾಹುಲ್ ಗಾಂಧಿ ಹೇಳಿದರು.
ನಿಮ್ಮ ಪ್ರಜಾಪ್ರಭುತ್ವದ ಈ ಕೊಲೆಯ ಪ್ರಮುಖ ಅಪರಾಧಿಗಳು : ಜ್ಞಾನೇಶ್ ಕುಮಾರ್, ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ. ಇವರು ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳು, ಆದರೆ ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರುದ್ಧ ದೊಡ್ಡ ದ್ರೋಹ ಎಸಗುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಹರ್ಯಾಣದಂತೆ ಬಿಹಾರದಲ್ಲೂ ಮತಗಳನ್ನು ಕದಿಯಲು ಸಿದ್ಧತೆ ನಡೆಸಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದರು. ಇದರ ಬೆನ್ನಲ್ಲೆ ರಾಹುಲ್ ಗಾಂಧಿ ಅವರ ಹೇಳಿಕೆ ಹೊರ ಬಿದ್ದಿದೆ.
बिहार के मेरे युवा साथियों,
— Rahul Gandhi (@RahulGandhi) November 5, 2025
मेरे Gen-Z भाइयों और बहनों,
कल का दिन सिर्फ़ मतदान का दिन नहीं,
बल्कि बिहार के भविष्य की दिशा तय करने का दिन है।
आपमें से कई पहली बार वोट डालने जा रहे हैं - यह सिर्फ़ आपका अधिकार नहीं,
बल्कि लोकतंत्र की सबसे बड़ी ज़िम्मेदारी है।
आपने देखा, हरियाणा… pic.twitter.com/PpDhlmKsoB







