ರಾಹುಲ್ ಗಾಂಧಿಗೆ ಮತ್ತೆ ಸಂಕಷ್ಟ: ಮಾನಹಾನಿ ಪ್ರಕರಣದಲ್ಲಿ ಜಾಮೀನು ರಹಿತ ವಾರಂಟ್ ಜಾರಿ

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಕಾಂಗ್ರೆಸ್ ಸಂಸದ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೊಸ ಸಂಕಷ್ಟಕ್ಕೆ ಗುರಿಯಾಗಿದ್ದು, ಮಾನಹಾನಿ ಪ್ರಕರಣವೊಂದರಲ್ಲಿ ಜಾರ್ಖಂಡ್ನ ಚೈಬಸ ಸಂಸದ-ಶಾಸಕರ ನ್ಯಾಯಾಲಯವು ಅವರಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ. ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವುದರಿಂದ ರಾಹುಲ್ ಗಾಂಧಿ ಅವರಿಗೆ ವಿನಾಯಿತಿ ನೀಡಬೇಕು ಎಂಬ ಅವರ ಪರ ವಕೀಲರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಜೂನ್ 16ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಬೇಕು ಎಂದು ರಾಹುಲ್ ಗಾಂಧಿ ಅವರಿಗೆ ನಿರ್ದೇಶನ ನೀಡಿದೆ.
2018ರಲ್ಲಿ ನಡೆದಿದ್ದ ಕಾಂಗ್ರೆಸ್ ಮಹಾಧಿವೇಶನದ ಸಂದರ್ಭದಲ್ಲಿ ಅಂದಿನ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ಪ್ರಶ್ನಿಸಿ, ಬಿಜೆಪಿ ನಾಯಕ ಪ್ರತಾಪ್ ಕಡಿಯಾರ್ ಎಂಬವರು ದಾಖಲಿಸಿದ್ದ ಮಾನಹಾನಿ ದಾವೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
"ಕೊಲೆ ಆರೋಪ ಎದುರಿಸುತ್ತಿರುವ ಯಾರಾದರೂ ಕೂಡಾ ಬಿಜೆಪಿಯ ಅಧ್ಯಕ್ಷರಾಗಬಹುದಾಗಿದೆ" ಎಂದು ರಾಹುಲ್ ಗಾಂಧಿ ಅವರು ತಮ್ಮ ಅಂದಿನ ಭಾಷಣದಲ್ಲಿ ಪರೋಕ್ಷವಾಗಿ ಅಂದಿನ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು.
ರಾಹುಲ್ ಗಾಂಧಿಯವರ ಈ ಹೇಳಿಕೆಯು ಮಾನಹಾನಿಕರವಾಗಿದ್ದು, ಎಲ್ಲ ಬಿಜೆಪಿ ಕಾರ್ಯಕರ್ತರಿಗೂ ಮಾಡಿರುವ ಅವಮಾನವಾಗಿದೆ ಎಂದು ಆರೋಪಿಸಿ, ಪ್ರತಾಪ್ ಕಟಿಯಾರ್ ಎಂಬ ಬಿಜೆಪಿ ನಾಯಕರೊಬ್ಬರು ಜುಲೈ 9, 2018ರಲ್ಲಿ ಚೈಬಸಾದ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಜಾರ್ಖಂಡ್ ಹೈಕೋರ್ಟ್ ಸೂಚನೆಯ ಬೆನ್ನಿಗೇ, ಫೆಬ್ರವರಿ 2020ರಲ್ಲಿ ಈ ಪ್ರಕರಣವನ್ನು ರಾಂಚಿಯ ಸಂಸದ-ಶಾಸಕರ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಇದರ ನಂತರ, ಈ ಪ್ರಕರಣವು ಚೈಬಸಾ ಸಂಸದ-ಶಾಸಕರ ನ್ಯಾಯಾಲಯಕ್ಕೇ ಮತ್ತೆ ವರ್ಗಾವಣೆಗೊಂಡಿತ್ತು. ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು, ಲೋಕಸಭಾ ವಿಪಕ್ಷ ನಾಯಕರೂ ಆದ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು.
ನ್ಯಾಯಾಲಯವು ಪದೇ ಪದೇ ಸಮನ್ಸ್ಗಳನ್ನು ಜಾರಿಗೊಳಿಸಿದರೂ, ರಾಹುಲ್ ಗಾಂಧಿ ಮಾತ್ರ ವಿಚಾರಣೆಗೆ ಗೈರಾಗಿದ್ದರು. ಹೀಗಾಗಿ, ಮೊದಲಿಗೆ ಜಾಮೀನು ಸಹಿತ ವಾರಂಟ್ ಅನ್ನು ನ್ಯಾಯಾಲಯ ಜಾರಿಗೊಳಿಸಿತ್ತು. ಈ ವಾರಂಟ್ಗೆ ತಡೆ ನೀಡಬೇಕು ಎಂದು ಕೋರಿ ರಾಹುಲ್ ಗಾಂಧಿ ಅವರು ಜಾರ್ಖಂಡ್ ಹೈಕೋರ್ಟ್ ಮೊರೆ ಹೋಗಿದ್ದರು. ಮಾರ್ಚ್ 20, 2024ರಲ್ಲಿ ಜಾರ್ಖಂಡ್ ಹೈಕೋರ್ಟ್ ಅವರ ಮೇಲ್ಮನವಿಯನ್ನು ವಿಲೇವಾರಿ ಮಾಡಿತ್ತು.
ಇದಾದ ನಂತರ, ರಾಹುಲ್ ಗಾಂಧಿ ಅವರು ವೈಯಕ್ತಿಕ ಹಾಜರಾತಿಯಿಂದ ತನಗೆ ವಿನಾಯಿತಿ ನೀಡಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಈ ಮನವಿಯನ್ನು ಚೈಬಸ ನ್ಯಾಯಾಲಯ ವಜಾಗೊಳಿಸಿತ್ತು.
ಈಗ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟುನಟ್ಟಿನ ಕ್ರಮ ಕೈಗೊಂಡಿರುವ ವಿಶೇಷ ನ್ಯಾಯಾಲಯ, ರಾಹುಲ್ ಗಾಂಧಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.







