ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ಆರೋಪ: ವಿಧ್ಯುಕ್ತ ಪತ್ರ ಬರೆಯುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಸೂಚನೆ

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ತನ್ನ ಲೇಖನಕ್ಕೆ ಚುನಾವಣಾ ಆಯೋಗವು ಉತ್ತರಿಸಬೇಕು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಶನಿವಾರದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ ಮೂಲಗಳು, ರಾಹುಲ್ ನೇರವಾಗಿ ಆಯೋಗಕ್ಕೆ ಪತ್ರ ಬರೆದರೆ ಉತ್ತರಿಸಲಾಗುವುದು ಎಂದು ರವಿವಾರ ತಿಳಿಸಿವೆ.
ತನ್ನ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಚುನಾವಣಾ ಆಯೋಗವು ಎಲ್ಲ ಆರೂ ರಾಷ್ಟ್ರೀಯ ಪಕ್ಷಗಳನ್ನು ಪ್ರತ್ಯೇಕ ಸಂವಾದಗಳಿಗೆ ಆಹ್ವಾನಿಸಿತ್ತು. ಇತರ ಐದು ಪಕ್ಷಗಳು ಚುನಾವಣಾ ಆಯೋಗವನ್ನು ಭೇಟಿಯಾಗಿದ್ದರೆ ಕಾಂಗ್ರೆಸ್ ತನ್ನ ಮೇ 15ರ ಭೇಟಿಯನ್ನು ರದ್ದುಗೊಳಿಸಿತ್ತು ಎಂದೂ ಈ ಮೂಲಗಳು ಬೆಟ್ಟು ಮಾಡಿವೆ.
ಮಹಾರಾಷ್ಟ್ರ ಚುನಾವಣೆಗಳಲ್ಲಿ ‘ಮ್ಯಾಚ್ ಫಿಕ್ಸಿಂಗ್’ ನಡೆದಿತ್ತು ಮತ್ತು ಅದು ಬಿಹಾರದಲ್ಲಿ ಮತ್ತು ಬಿಜೆಪಿ ಸೋಲುವ ಭೀತಿಯಿರುವ ಎಲ್ಲ ಕಡೆಯೂ ಪುನರಾವರ್ತನೆಗೊಳ್ಳಲಿದೆ ಎಂದು ರಾಹುಲ್ ತನ್ನ ಲೇಖನದಲ್ಲಿ ಆರೋಪಿಸಿದ್ದರು.
ಮಹಾರಾಷ್ಟ್ರದ ಮತಗಟ್ಟೆಗಳ ಸಂಜೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆಗೊಳಿಸಬೇಕೆಂಬ ರಾಹುಲ್ ಆಗ್ರಹ ಕುರಿತಂತೆ ಮೂಲಗಳು, ಚುನಾವಣಾ ಆಯೋಗದ ಸೂಚನೆಗಳ ಪ್ರಕಾರ ಚುನಾವಣಾ ವಿವಾದದ ಅರ್ಜಿ ಸಲ್ಲಿಕೆಯಾದಾಗ ಸಕ್ಷಮ ಉಚ್ಚ ನ್ಯಾಯಾಲಯವು ಯಾವಾಗಲೂ ಈ ದೃಶ್ಯಾವಳಿಗಳನ್ನು ಪರಿಶೀಲಿಸಬಹುದು ಎಂದು ತಿಳಿಸಿದವು.







