“ಮಾತುಬಾರದ ಜೀವಿಗಳು, ಅಳಿಸಬೇಕಾದ ಸಮಸ್ಯೆಗಳಲ್ಲ”: ದಿಲ್ಲಿ ನಗರವನ್ನು ಬೀದಿ ನಾಯಿಗಳಿಂದ ಮುಕ್ತಗೊಳಿಸುವ ಸುಪ್ರೀಂ ಕೋರ್ಟ್ ಆದೇಶಕ್ಕೆ ರಾಹುಲ್ ಗಾಂಧಿ ಅಸಮಾಧಾನ

ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ: ದಿಲ್ಲಿ ಮತ್ತು ರಾಷ್ಟ್ರ ರಾಜಧಾನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳನ್ನು ಹಿಡಿದು ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರೋಧಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಈ ನಿರ್ಧಾರವು ಹಲವು ವರ್ಷಗಳಿಂದ ಅನುಸರಿಸುತ್ತಿರುವ ಮಾನವೀಯ ಹಾಗೂ ವಿಜ್ಞಾನಾಧಾರಿತ ನೀತಿಯಿಂದ ಹಿಂದಕ್ಕೆ ಸರಿದಂತಾಗಿದೆ. ಈ ಮಾತುಬಾರದ ಜೀವಿಗಳು
ಅಳಿಸಬೇಕಾದ ಸಮಸ್ಯೆಗಳಲ್ಲ. ಆಶ್ರಯ, ಶಸ್ತ್ರಚಿಕಿತ್ಸೆ, ಲಸಿಕೆ ಹಾಗೂ ಸಮುದಾಯದ ಕಾಳಜಿ ಮೂಲಕ ಬೀದಿಗಳನ್ನು ಕ್ರೂರತೆ ಇಲ್ಲದೆ ಸುರಕ್ಷಿತವಾಗಿರಿಸಬಹುದು. ಸಾಮೂಹಿಕವಾಗಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವುದು ಕ್ರೂರ, ದೂರದೃಷ್ಟಿಯಿಲ್ಲದ ಕ್ರಮವಾಗಿದ್ದು, ಮಾನವೀಯತೆಯನ್ನು ಕಳೆದುಕೊಳ್ಳುವಂತಾಗಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಪ್ರಾಣಿಗಳ ಕಲ್ಯಾಣ ಎರಡನ್ನೂ ಒಟ್ಟಿಗೆ ಸಾಧಿಸಬಹುದು ಎಂದು ಹೇಳಿದ್ದಾರೆ.
ಬೀದಿ ನಾಯಿ ಕಡಿತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಆರ್ಮಹಾದೇವನ್ ಅವರ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ನಗರದ ಹೊರವಲಯವನ್ನು ಬೀದಿನಾಯಿಗಳಿಂದ ಮುಕ್ತಗೊಳಿಸುವುದು ಮೊಟ್ಟ ಮೊದಲ ಆದ್ಯತೆಯಾಗಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿತ್ತು.
ಪ್ರಾಣಿ ಸಂರಕ್ಷಣೆ ಕಾರ್ಯಕರ್ತರು ಮತ್ತು ‘ಪ್ರಾಣಿ ಪ್ರೇಮಿಗಳು’ ಎಂದು ಕರೆಸಿಕೊಳ್ಳುವವರಿಗೆ ರೇಬೀಸ್ಗೆ ಬಲಿಯಾದ ಮಕ್ಕಳನ್ನು ಮರಳಿ ತಂದುಕೊಡಲು ಸಾಧ್ಯವೇ ಎಂದು ನ್ಯಾಯಪೀಠ ಪ್ರಶ್ನಿಸಿತ್ತು.
The SC’s directive to remove all stray dogs from Delhi-NCR is a step back from decades of humane, science-backed policy.
— Rahul Gandhi (@RahulGandhi) August 12, 2025
These voiceless souls are not “problems” to be erased.
Shelters, sterilisation, vaccination & community care can keep streets safe - without cruelty.
Blanket…







