ಭೂಕುಸಿತದಿಂದ ತತ್ತರಿಸಿರುವ ವಯನಾಡ್ ಗೆ ನಾಳೆ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಭೇಟಿ

ರಾಹುಲ್ ಗಾಂಧಿ | PTI
ಹೊಸದಿಲ್ಲಿ: ಕೇರಳದ ವಯನಾಡಿನಲ್ಲಿ ಇಂದು ಸಂಭವಿಸಿದ ಭಾರೀ ಭೂಕುಸಿತದಲ್ಲಿ ಅಪಾರ ಸಾವು ನೋವು ಸಂಭವಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಸಹೋದರಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರೊಂದಿಗೆ ವಯನಾಡಿಗೆ ತೆರಳುವ ನಿರೀಕ್ಷೆಯಿದೆ. ರಾಹುಲ್ ಅವರು ರಾಯ್ಬರೇಲಿ ಹಾಗೂ ವಯನಾಡಿನಿಂದ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ರಾಹುಲ್, ಪ್ರಿಯಾಂಕ ಅವರ ವಯನಾಡ್ ಭೇಟಿ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, “ಇದು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕಾದ ಘಟನೆ. ಗರಿಷ್ಠ ಜನರ ಪ್ರಾಣ ಉಳಿಸುವಂತಾಗಲು ಎಲ್ಲರೂ ಶ್ರಮಿಸಬೇಕಿದೆ. ನಾವು ಅಲ್ಲಿಗೆ ತೆರಳುವ ಯೋಜನೆಯಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಕೂಡ ಹೋಗುವ ಯೋಚನೆಯಲ್ಲಿದ್ದಾರೆ,” ಎಂದು ಹೇಳಿದರು.
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಂಪೂರ್ಣ ಸಹಾಯ ಮತ್ತು ಸಹಕಾರ ನೀಡುವ ಭರವಸೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ್ದಾರೆಂದು ವೇಣುಗೋಪಾಲ್ ಹೇಳಿದರು.





