ಯುಜಿಸಿ ನಿಯಮಾವಳಿಗಳು ದೇಶದ ಮೇಲೆ ಏಕಸ್ವಾಮ್ಯ ಸಾಧಿಸುವ ಆರೆಸ್ಸೆಸ್ ಪ್ರಯತ್ನ: ರಾಹುಲ್ ಗಾಂಧಿ

Photo - X/@INCIndia
ಹೊಸದಿಲ್ಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದ ಕರಡು ನಿಯಮಾವಳಿಗಳಿಗೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಗುರುವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಶಿಕ್ಷಕರು ಮತ್ತು ಬೋಧಕ ಸಿಬ್ಬಂದಿಯ ನೇಮಕಾತಿಗೆ ಸಂಬಂಧಿಸಿದ ಪ್ರಸ್ತಾಪಿತ ನಿಯಮಾವಳಿಗಳು ದೇಶದ ಮೇಲೆ ‘‘ಒಂದು ಇತಿಹಾಸ, ಒಂದು ಪರಂಪರೆ ಮತ್ತು ಒಂದು ಭಾಷೆಯನ್ನು ಹೇರುವ’’ ಪ್ರಯತ್ನವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ದೇಶದ ಇತರ ‘‘ಎಲ್ಲಾ ಇತಿಹಾಸಗಳು, ಸಂಸ್ಕೃತಿಗಳು ಮತ್ತು ಪರಂಪರೆಗಳನ್ನು ಅಳಿಸಿಹಾಕುವುದು’’ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಉದ್ದೇಶವಾಗಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.
‘‘ಇದು ಅವರ ಆರಂಭಿಕ ನಡೆಯಾಗಿದೆ. ಇದನ್ನು ಮೊದಲು ಸಾಧಿಸಲು ಅವರು ಬಯಸುತ್ತಾರೆ. ಇದು ಸಂವಿಧಾನದ ಮೇಲೆ ದಾಳಿ ಮಾಡುತ್ತದೆ. ಯಾಕೆಂದರೆ, ಇದು ಒಂದು ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಅದು ಅವರ ಸಿದ್ಧಾಂತ. ಅಂದರೆ ಒಂದು ಇತಿಹಾಸ, ಒಂದು ಪರಂಪರೆ, ಒಂದು ಭಾಷೆಯ ಸಿದ್ಧಾಂತ. ಅದನ್ನು ಅವರು ಇಡೀ ದೇಶದ ಮೇಲೆ ಹೇರಲು ಪ್ರಯತ್ನಿಸುತ್ತಾರೆ’’ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಹೇಳಿದರು.
ದಿಲ್ಲಿಯ ಜಂತರ್-ಮಂತರ್ನಲ್ಲಿ ಡಿಎಮ್ಕೆ ಪಕ್ಷದ ವಿದ್ಯಾರ್ಥಿ ಘಟಕವು ಕರೆ ನೀಡಿದ್ದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ವಿವಿಧ ರಾಜ್ಯಗಳ ಶಿಕ್ಷಣ ವ್ಯವಸ್ಥೆಗಳಲ್ಲಿ ಹಸ್ತಕ್ಷೇಪ ನಡೆಸುವ ಪ್ರಯತ್ನವು ‘‘ಆರೆಸ್ಸೆಸ್ ಕಾರ್ಯಸೂಚಿಯನ್ನು ಹೇರುವ ಇನ್ನೊಂದು ಪ್ರಯತ್ನವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.
‘‘ಪ್ರತಿಯೊಂದು ರಾಜ್ಯವು ತನ್ನದೇ ಆದ ಸಂಪ್ರದಾಯಗಳು, ಇತಿಹಾಸ, ಭಾಷೆಯನ್ನು ಹೊಂದಿದೆ. ಅದಕ್ಕಾಗಿಯೇ, ಸಂವಿಧಾನದಲ್ಲಿ ಭಾರತವನ್ನು ‘ರಾಜ್ಯಗಳ ಒಕ್ಕೂಟ’ ಎಂಬುದಾಗಿ ಕರೆಯಲಾಗಿದೆ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ. ಅಂದರೆ ಈ ಎಲ್ಲಾ ಇತಿಹಾಸಗಳು, ಸಂಪ್ರದಾಯಗಳು, ಭಾಷೆಗಳು ಜೊತೆಯಾಗಿ ಭಾರತವನ್ನು ರಾಜ್ಯಗಳ ಒಕ್ಕೂಟವಾಗಿಸುತ್ತವೆ. ಹಾಗಾಗಿ, ಈ ರೀತಿಯಲ್ಲಿ ನಾವು ಯೋಚಿಸಬೇಕು’’ ಎಂದು ರಾಹುಲ್ ಗಾಂಧಿ ನುಡಿದರು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
https://whatsapp.com/channel/0029VaA8ju86LwHn9OQpEq28







