ಮಹಾರಾಷ್ಟ್ರ | ಆತ್ಮಹತ್ಯೆ ಮಾಡಿಕೊಂಡ ವೈದ್ಯೆಯ ಕುಟುಂಬಸ್ಥರ ಜೊತೆ ರಾಹುಲ್ ಗಾಂಧಿ ಮಾತುಕತೆ

ರಾಹುಲ್ ಗಾಂಧಿ | Photo Credit : PTI
ಮುಂಬೈ : ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವೈದ್ಯೆಯ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನ್ಯಾಯದ ಬೇಡಿಕೆಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಪಿಟಿಐ ವರದಿಯ ಪ್ರಕಾರ, ವೈದ್ಯೆಯ ಆತ್ಮಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು. ಘಟನೆ ನಡೆದು ಒಂದು ವಾರ ಕಳೆದಿರುವುದರಿಂದ ಸಾಕ್ಷ್ಯಾಧಾರಗಳು ನಾಶವಾಗುವ ಸಾಧ್ಯತೆ ಇದೆ ಎಂದು ಸಂತ್ರಸ್ತ ಕುಟುಂಬವೂ ರಾಹುಲ್ ಗಾಂಧಿ ಬಳಿ ಕಳವಳವನ್ನು ವ್ಯಕ್ತಪಡಿಸಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಬೀಡ್ ಜಿಲ್ಲೆಯ ಕವಡ್ಗಾಂವ್ ಗ್ರಾಮದಲ್ಲಿರುವ ಸಂತ್ರಸ್ತ ವೈದ್ಯೆಯ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ದೂರವಾಣಿ ಮೂಲಕ ಸಂತ್ರಸ್ತೆಯ ಕುಟುಂಬಸ್ಥರ ಜೊತೆ ರಾಹುಲ್ ಗಾಂಧಿ ಮಾತನಾಡಿದರು. ತನಿಖೆಗಾಗಿ ಎಸ್ಐಟಿ ರಚಿಸುವಂತೆ ಸರಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದರು.
ಅಕ್ಟೋಬರ್ 23ರ ರಾತ್ರಿ ಸತಾರಾ ಜಿಲ್ಲೆಯ ಫಾಲ್ಟನ್ ಪಟ್ಟಣದ ಹೋಟೆಲ್ ಕೊಠಡಿಯಲ್ಲಿ 29 ವರ್ಷದ ವೈದ್ಯೆಯ ಮೃತದೇಹ ಪತ್ತೆಯಾಗಿತ್ತು. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೋಪಾಲ್ ಬದನೆ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಮತ್ತು ಸಾಫ್ಟ್ವೇರ್ ಎಂಜಿನಿಯರ್ ಪ್ರಶಾಂತ್ ಬಂಕರ್ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ವೈದ್ಯೆ ಆತ್ಮಹತ್ಯೆಗೆ ಮೊದಲು ಅಂಗೈಯಲ್ಲಿ ಬರೆದಿದ್ದರು. ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.





