ಕಾಂಗ್ರೆಸ್ ತರಬೇತಿ ಕಾರ್ಯಕ್ರಮಕ್ಕೆ ತಡವಾಗಿ ಆಗಮನ: ರಾಹುಲ್ ಗಾಂಧಿಗೆ ಹತ್ತು ಭಸ್ಕಿ ಹೊಡೆಯುವ ಶಿಕ್ಷೆ!

Photo Credit : NDTV
ಭೋಪಾಲ್: ‘ವೋಟ್ ಚೋರಿ’ ಅಭಿಯಾನದ ಮೂಲಕ ಕಾಂಗ್ರೆಸ್ ಪಕ್ಷದ ಅಗ್ರಗಣ್ಯ ನಾಯಕರಾಗಿ ರಾಹುಲ್ ಗಾಂಧಿ ಬದಲಾಗಿರುವುದು ತಿಳಿಯದ ಸಂಗತಿಯೇನಲ್ಲ. ಆದರೆ, ಮಧ್ಯಪ್ರದೇಶದ ಭೋಪಾಲ್ ನಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜನೆಗೊಂಡಿದ್ದ ತರಬೇತಿ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದಕ್ಕಾಗಿ ಅವರು 10 ಭಸ್ಕಿ ಹೊಡೆಯುವ ಶಿಕ್ಷೆಗೆ ಗುರಿಯಾದ ಸ್ವಾರಸ್ಯಕರ ಸಂಗತಿ ನಡೆದಿದೆ.
ಕಾಂಗ್ರೆಸ್ ಕಾರ್ಯಕ್ರಮಗಳಿಗೆ ತಡವಾಗಿ ಆಗಮಿಸಕೂಡದು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಈ ನಿಯಮವನ್ನು ಪಾಲಿಸಿದ ರಾಹುಲ್ ಗಾಂಧಿ, ತಮ್ಮ ತಪ್ಪಿಗೆ ಶಿಕ್ಷೆಯಾಗಿ 10 ಭಸ್ಕಿಗಳನ್ನು ಹೊಡೆಯುವ ಮೂಲಕ, ತಮ್ಮ ಮೈ ಬೆವರು ಹರಿಸಿದರು.
ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ಹುದ್ದೆಗಳ ಪುನಶ್ಚೇತನಕ್ಕಾಗಿ ಮಧ್ಯಪ್ರದೇಶದ ಪಚ್ಮಾರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಂಘಟನ್ ಸೃಜನ್ ಅಭಿಯಾನ್’ ಭಾಗವಾಗಿ ನಡೆದ ತಂಡದ ತರಬೇತಿ ಅವಧಿಯ ವೇಳೆ ಈ ಘಟನೆ ನಡೆಯಿತು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಬಿಹಾರ ವಿಧಾನಸಭಾ ಚುನಾವಣೆಯ ಬಿಡುವಿಲ್ಲದ ಪ್ರಚಾರ ಕಾರ್ಯಕ್ರಮದ ನಡುವೆಯೂ ಸಮಯ ಮಾಡಿಕೊಂಡು ರಾಹುಲ್ ಗಾಂಧಿ ಮಧ್ಯಪ್ರದೇಶದಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಆದರೆ, ತಮ್ಮ ಅವಧಿಯಿದ್ದಾಗ ಕಾರ್ಯಕ್ರಮಕ್ಕೆ ಕೊಂಚ ತಡವಾಗಿ ಆಗಮಿಸಿದರು. ಈ ವೇಳೆ ತರಬೇತಿ ಮುಖ್ಯಸ್ಥರಾಗಿದ್ದ ಸಚಿನ್ ರಾವ್, ತಡವಾಗಿ ಆಗಮಿಸಿದವರು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದರು. ನಾನೇನು ಮಾಡಬೇಕು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದಾಗ, “10 ಭಸ್ಕಿ ಹೊಡೆಯಬೇಕು” ಎಂದು ಸಚಿನ್ ರಾವ್ ತಮಾಷೆಯಾಗಿ ಸೂಚಿಸಿದರು.
ಬಿಳಿ ಟಿ ಶರ್ಟ್ ಹಾಗೂ ಪ್ಯಾಂಟ್ ತೊಟ್ಟಿದ್ದ ರಾಹುಲ್ ಗಾಂಧಿ, ಅವರ ಸೂಚನೆಯಂತೆ ತಕ್ಷಣವೇ ಭಸ್ಕಿ ಹೊಡೆಯಲು ಪ್ರಾರಂಭಿಸಿದರು. ಅವರಿಗೆ ಜಿಲ್ಲಾಧ್ಯಕ್ಷರೂ ಜೊತೆ ನೀಡಿದರು. ಸಚಿನ್ ರಾವ್ ಅವರ ಈ ತುಂಟ ಶಿಕ್ಷೆಯು ಕೆಲವೇ ಕ್ಷಣಗಳಲ್ಲಿ ತಂಡದ ದೈಹಿಕ ವ್ಯಾಯಾಮವಾಗಿ ರೂಪಾಂತರಗೊಂಡಿತು.
ನಂತರ ಮಾತನಾಡಿದ ರಾಹುಲ್ ಗಾಂಧಿ, “ನಮಗೆ ಜಿಲ್ಲಾಧ್ಯಕ್ಷರಿಂದ ಉತ್ತಮ ಪ್ರತಿಸ್ಪಂದನೆ ದೊರೆಯಿತು” ಎಂದು ಲಘು ಹಾಸ್ಯದೊಂದಿಗೆ ಹೇಳಿದರು.







