ಸಂಸತ್ತಿನಲ್ಲಿ ನೀಟ್ ಕುರಿತು ಚರ್ಚೆ ನಡೆಸುವಂತೆ ಪ್ರಧಾನಿ ಮೋದಿಯನ್ನು ಆಗ್ರಹಿಸಿದ ರಾಹುಲ್ ಗಾಂಧಿ

Photo : PTI
ಹೊಸದಿಲ್ಲಿ: ನೀಟ್ ಪರೀಕ್ಷೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಧಿಕೃತ ಪತ್ರ ಬರೆದಿದ್ದಾರೆ. ಸುಮಾರು 24 ಲಕ್ಷ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಲು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯತೆಯ ಕುರಿತು ಪತ್ರದಲ್ಲಿ ಒತ್ತಿ ಹೇಳಲಾಗಿದೆ.
"ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ನೀವು ಈ ಚರ್ಚೆಯ ಮುಂದಾಳತ್ವ ವಹಿಸುವುದು ಸೂಕ್ತವಾಗಲಿದೆ ಎಂಬುದು ನನ್ನ ವಿಶ್ವಾಸವಾಗಿದೆ" ಎಂದು ಅವರು ಹೇಳಿದ್ದಾರೆ.
ಸಂಸತ್ತಿನ ಉಭಯ ಸದನಗಳಲ್ಲೂ ನೀಟ್ ಕುರಿತು ಚರ್ಚೆ ನಡೆಸಬೇಕು ಎಂಬ ವಿರೋಧ ಪಕ್ಷಗಳ ಮನವಿಯನ್ನು ನಿರಾಕರಿಸಲಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಈ ಕುರಿತು ಸರಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ್ದರು ಎಂದು ಪತ್ರದಲ್ಲಿ ಗಮನ ಸೆಳೆಯಲಾಗಿದೆ.
"ಭವಿಷ್ಯದಲ್ಲಿ ರಚನಾತ್ಮಕ ಮಾರ್ಗ ಕಂಡು ಹಿಡಿಯುವುದು ನಮ್ಮ ಗುರಿಯಾಗಿದೆ. ಈ ಹಂತದಲ್ಲಿ ನಮ್ಮ ಒಂದೇ ಕಾಳಜಿಯೆಂದರೆ, ಭಾರತದಾದ್ಯಂತದ ಸುಮಾರು 24 ಲಕ್ಷ ವಿದ್ಯಾರ್ಥಿಗಳ ಅಭಿವೃದ್ದಿ. ಈ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಅಸಾಧಾರಣ ತ್ಯಾಗ ಮಾಡಿದ್ದಾರೆ. ಹಲವಾರ ಪಾಲಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯು ಜೀವಿತಾವಧಿ ದ್ರೋಹವಾಗಿದೆ. ಇಂದು ಈ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ನಮ್ಮತ್ತ ಹಾಗೂ ಅವರ ಜನ ಪ್ರತಿನಿಧಿಗಳತ್ತ ನೋಡುತ್ತಿದ್ದಾರೆ. ನಾವು ದಿಟ್ಟ ಹಾಗೂ ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆಯ ಆಳವನ್ನು ನೀಟ್ ಹಗರಣ ಎತ್ತಿ ತೋರಿಸಿರುವುದರಿಂದ, ಈ ಹಗರಣವು ನಮ್ಮ ಗಮನಕ್ಕೆ ಅರ್ಹವಾಗಿದೆ. ಕಳೆದ ಏಳು ವರ್ಷಗಳಲ್ಲಿ 80ಕ್ಕೂ ಹೆಚ್ಚು ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಇದರಿಂದ ಎರಡು ಕೋಟಿಗೂ ಅಧಿಕ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದಾರೆ. ಇತರ ಪರೀಕ್ಷೆಗಳನ್ನು ಮುಂದೂಡಿರುವುದು ಹಾಗೂ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಮಹಾ ನಿರ್ದೇಶಕರನ್ನು ಬದಲಿಸಿರುವುದು ನಮ್ಮ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯಲ್ಲಿನ ವೈಫಲ್ಯವನ್ನು ಮುಚ್ಚಿಕೊಳ್ಳುವ ಕ್ರಮವಾಗಿದೆ" ಎಂದು ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.







