ದಲಿತರ ಬಗೆಗಿನ ರಾಹುಲ್ ಗಾಂಧಿ ನಿಲುವು ಸ್ವಾರ್ಥ ರಾಜಕೀಯದ ಭಾಗ: ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಆರೋಪ

ರಾಹುಲ್ ಗಾಂಧಿ / ಮಾಯಾವತಿ (Photo: PTI)
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷವು ದಲಿತರ ಮತ್ತು ಬುಡಕಟ್ಟು ಸಮುದಾಯದ ರಾಜಕೀಯ, ಆರ್ಥಿಕ ಹಾಗೂ ಮೀಸಲಾತಿ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ನಿರಂತರವಾಗಿ ವಿಫಲವಾಗಿದೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಅವರು ಶನಿವಾರ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಅವರು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ದಲಿತರು ಮತ್ತು ಪರಿಶಿಷ್ಟ ಜನಾಂಗದವರ ಬಗೆಗೆ ದೀರ್ಘಕಾಲದ ನಿರ್ಲಕ್ಷ್ಯವನ್ನು ಹೊಂದಿದೆ. ಅವರ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಪಕ್ಷವು ವಿಫಲವಾಗಿದೆ. ಇದನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿರುವುದು ಯಾವುದೇ ಹೊಸ ವಿಷಯವಲ್ಲ, ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಗಾಂಧಿಯ ನಿಲುವು ಸ್ವಾರ್ಥ ರಾಜಕೀಯದ ಭಾಗವಾಗಿದ್ದು, ದಲಿತ ಸಮುದಾಯದ ಭವಿಷ್ಯದ ಬಗ್ಗೆ ಕಾಂಗ್ರೆಸ್ ಪಕ್ಷವು ಯಾವಾಗಲೂ ಸರಿಯಾದ ನಿಲುವು ಇಟ್ಟುಕೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಈ ನಿಲುವುಗಳು ದಲಿತರು ಮತ್ತು ಇತರ ಶೋಷಿತ ವರ್ಗಗಳನ್ನು ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಲು ಪ್ರೇರೆಪಣೆ ನೀಡಿತು ಎಂದು ಅವರು ಸ್ಪಷ್ಟಪಡಿಸಿದರು.
"ಈ ನಿಲುವುಗಳು ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಅನ್ನು ಉತ್ತರ ಪ್ರದೇಶ ಸೇರಿದಂತೆ ಅನೇಕ ಪ್ರಮುಖ ರಾಜ್ಯಗಳಲ್ಲಿ ಅಧಿಕಾರದಿಂದ ದೂರ ಮಾಡಿವೆ," ಎಂದು ಮಾಯಾವತಿ ಟೀಕಿಸಿದ್ದಾರೆ.
"ಈಗ ಅಧಿಕಾರ ಕಳೆದುಕೊಂಡ ನಂತರ ದಲಿತರನ್ನು ನೆನಪಿಸಿಕೊಳ್ಳುವುದು, ಕಾಂಗ್ರೆಸ್ ನ ರಾಜಕೀಯ ಲಾಭಕ್ಕಾಗಿ ಮೊಸಳೆ ಕಣ್ಣೀರು ಸುರಿಸುವುದನ್ನು ತೋರುತ್ತದೆ," ಎಂದು ವಾಗ್ದಾಳಿ ನಡೆಸಿದರು. ಬಿಜೆಪಿಯ ಮೇಲೂ ಟೀಕಾ ಪ್ರಹಾರ ನಡೆಸಿದ ಅವರು, ಎನ್ ಡಿ ಎ ಯ ನಡೆಯನ್ನು "ಬೂಟಾಟಿಕೆ" ಎಂದು ವ್ಯಂಗ್ಯವಾಡಿದರು.
"ಸ್ವಾತಂತ್ರ್ಯದ ನಂತರ ಸುಮಾರು ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಪಕ್ಷವು ಮೀಸಲಾತಿಯ ಸಂಪೂರ್ಣ ಪ್ರಯೋಜನಗಳನ್ನು ತಡೆದುಹಿಡಿದಿದ್ದು, ಅಂಬೇಡ್ಕರ್ರಿಗೆ ಭಾರತ ರತ್ನ ನೀಡಿ ಗೌರವಿಸುವಲ್ಲಿ ವಿಫಲವಾಗಿದೆ," ಎಂದು ಮಾಯಾವತಿ ಆರೋಪಿಸಿದರು.
ಎಸ್ಸಿ/ಎಸ್ಟಿ ಮತ್ತು ಓಬಿಸಿ ಮೀಸಲಾತಿಗಳನ್ನು ನಿಷ್ಪರಿಣಾಮಕಾರಿಯಾಗಿ ಮಾಡಲು ಎಲ್ಲಾ ಜಾತಿವಾದಿ ಪಕ್ಷಗಳು ಯೋಜಿತವಾಗಿ ಕೆಲಸ ಮಾಡುತ್ತಿವೆ ಎಂದು ಅವರು ಆಕ್ಷೇಪಿಸಿದರು.
"ಇವೆಲ್ಲಾ ಒಂದೇ ಬಟ್ಟೆಯಿಂದ ಕತ್ತರಿಸಲಾದ ಪಕ್ಷಗಳು," ಎಂದು ಮಾಯಾವತಿ ವಾಗ್ದಾಳಿ ನಡೆಸಿದರು.
ತಮ್ಮ ಸರ್ಕಾರದ ಸಾಧನೆಗಳ ಕುರಿತು ಮಾತನಾಡಿದ ಅವರು, "ಉತ್ತರ ಪ್ರದೇಶದ ಬಿಎಸ್ಪಿ ಆಡಳಿತದಲ್ಲಿ ಬಡವರು, ತುಳಿತಕ್ಕೊಳಗಾದವರು ಮತ್ತು ಬಹುಜನ ಸಮಾಜದ ಎಲ್ಲ ವರ್ಗಗಳ ಸುರಕ್ಷತೆ, ಘನತೆ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು", ಎಂದು ಉಲ್ಲೇಖಿಸಿದರು.
"ರಾಷ್ಟ್ರದ ಬಹುಜನರ ಹಿತಾಸಕ್ತಿಗಳು ಕೇವಲ ಬಿಎಸ್ಪಿಯ ಕೈಯಲ್ಲಿಯೇ ಸುರಕ್ಷಿತವಾಗಿವೆ," ಎಂದು ನಾಲ್ಕು ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಪಟ್ಟ ವಹಿಸಿದ್ದ ಮಾಯಾವತಿ ಅವರು ವಿಶ್ವಾಸ ವ್ಯಕ್ತಪಡಿಸಿದರು.







