ರಾಜ್ಯ ಸರಕಾರಗಳಿಗೆ ಅಡ್ಡಿಪಡಿಸಲು ಕೇಂದ್ರದಿಂದ ರಾಜ್ಯಪಾಲರುಗಳ ದುರ್ಬಳಕೆ: ರಾಹುಲ್ ಆರೋಪ

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಚುನಾಯಿತ ರಾಜ್ಯ ಸರಕಾರಗಳ ಧ್ವನಿಗಳನ್ನು ಹತ್ತಿಕ್ಕಲು ಹಾಗೂ ಅವುಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಲು ಮೋದಿ ಸರಕಾರವು ರಾಜ್ಯಪಾಲರುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಒಕ್ಕೂಟ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ಅಪಾಯಕಾರಿ ದಾಳಿ ಇದಾಗಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬುಧವಾರ ಆಪಾದಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ರಾಜ್ಯಗಳ ಒಕ್ಕೂಟವಾದ ಭಾರತದ ಶಕ್ತಿಯು ಅದರ ವೈವಿಧ್ಯತೆಯಲ್ಲಿದೆ.ಭಾರತದ ಪ್ರತಿಯೊಂದು ರಾಜ್ಯವು ತನ್ನದೇ ಅದ ಧ್ವನಿಯನ್ನು ಹೊಂದಿದ್ದು, ಅದನ್ನು ದಮನಿಸುವಂತಹ ಯಾವುದೇ ಪ್ರಯತ್ನವನ್ನು ವಿರೋಧಿಸಬೇಕಾಗಿದೆ ಎಂದು ಬರೆದಿದ್ದಾರೆ.
ರಾಜ್ಯಗಳ ಮಸೂದೆಗೆ ಅಂಕಿತಹಾಕಲು ರಾಷ್ಟ್ರಪತಿಯವರ ಕಾಲಮಿತಿ ನಿರ್ಧರಿಸುವ ಕುರಿತಾಗಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಕೇಂದ್ರ ಸರಕಾರದ ಅಧ್ಯಕ್ಷೀಯ ಪ್ರಸ್ತಾವನೆಯನ್ನು ಖಂಡಿಸಿದ ಎಂ.ಕೆ. ಸ್ಟಾಲಿನ್ರ ಪೋಸ್ಟ್ ಅನ್ನು,ರಾಹುಲ್ ಅವರು ಟ್ಯಾಗ್ ಮಾಡಿದ್ದಾರೆ. ತಮಿಳುನಾಡು ರಾಜ್ಯಪಾಲರ ಪ್ರಕರಣ ಹಾಗೂ ಪೂರ್ವನಿದರ್ಶನಳಿಗೆ ಸಂಬಂಧಿಸಿ ಸಂವಿಧಾನದ ನಿಲುವು ಏನೆಂಬುದನ್ನು ಸುಪ್ರೀಂಕೋರ್ಟ್ ಈಗಾಗಲೇ ಇತ್ಯರ್ಥಪಡಿಸಿದೆ. ಜನಾದೇಶವನ್ನು ದುರ್ಬಲಗೊಳಿಸುವುದಕ್ಕಾಗಿ ತಮಿಳುನಾಡು ರಾಜ್ಯಪಾಲರು ಬಿಜೆಪಿಯ ಅಣತಿಯಂತೆ ಕಾರ್ಯಾಚರಿಸುತ್ತಿದ್ದಾರೆಂಬ ವಾಸ್ತವವನ್ನು ಈ ಪ್ರಕರಣ ಬಯಲಿಗೆಳೆದಿದೆ’’ ಎಂದು ರಾಹುಲ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.







