ಬಿಹಾರದ ‘ಮೃತ’ ಮತದಾರರೊಂದಿಗೆ ರಾಹುಲ್ ಗಾಂಧಿ ಚಹಾ ಸೇವನೆ!

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಕಾರಣಕಕ್ಕೆ ಮತಪಟ್ಟಿಯಿಂದ ಹೊರ ಹಾಕಲ್ಪಟ್ಟಿರುವ ಬಿಹಾರದ ಏಳು ಮಂದಿಯನ್ನು ಬುಧವಾರ ಭೇಟಿಯಾದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮತಗಳ್ಳತನದ ವಿರುದ್ಧ ಇಂಡಿಯಾ ಮೈತ್ರಿಕೂಟ ಹೋರಾಟ ನಡೆಸಲಿದೆ ಎಂದು ಭರವಸೆ ನೀಡಿದರು.
ಬಿಹಾರದಲ್ಲಿನ ವಿಶೇಷ ತೀವ್ರ ಮತಪಟ್ಟಿ ಪರಿಷ್ಕಣರಣೆಯ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ವಿಚಾರಣೆಯಲ್ಲಿ ಪಾಲ್ಗೊಳ್ಳಲು ರಾಮಿಕ್ ಬಾಯಿ ರೇ, ಹರೇಂದ್ರ ರೇ, ಲಾಲ್ವತಿ ದೇವಿ, ಪೂನಂ ಕುಮಾರಿ ಹಾಗೂ ಮುನ್ನಾ ಕುಮಾರ್ ಬಿಹಾರದಿಂದ ದಿಲ್ಲಿಗೆ ಆಗಮಿಸಿದ್ದರು.
ಆರ್ ಜೆ ಡಿ ರಾಜ್ಯಸಭಾ ಸಂಸದ ಸಂಜಯ್ ಯಾದವ್ ರೊಂದಿಗೆ ರಾಹುಲ್ ಗಾಂಧಿ ನಿವಾಸಕ್ಕೆ ಅವರೆಲ್ಲ ಆಗಮಿಸಿದ್ದರು. ಅವರನ್ನು ಭೇಟಿಯಾದ ರಾಹುಲ್ ಗಾಂಧಿ, ನಂತರ, “ಜೀವನದಲ್ಲಿ ತುಂಬಾ ಕುತೂಹಲಕಾರಿ ಅನುಭವಗಳಿರುತ್ತವೆ. ಆದರೆ, ಮೃತ ವ್ಯಕ್ತಿಗಳೊಂದಿಗೆ ಚಹಾ ಕುಡಿಯುವ ಅವಕಾಶ ನನಗೆಂದು ದೊರೆತಿರಲಿಲ್ಲ. ಈ ವಿಶೇಷ ಅನುಭವ ದೊರಕಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಚುನಾವಣಾ ಆಯೋಗ!” ಎಂದು ವ್ಯಂಗ್ಯವಾಗಿ ಅವರೊಂದಿಗಿನ ವಿಡಿಯೊವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
जीवन में बहुत दिलचस्प अनुभव हुए हैं,
— Rahul Gandhi (@RahulGandhi) August 13, 2025
लेकिन कभी 'मृत लोगों' के साथ चाय पीने का मौका नहीं मिला था।
इस अनोखे अनुभव के लिए, धन्यवाद चुनाव आयोग! pic.twitter.com/Rh9izqIFsD
ಮತಪಟ್ಟಿ ಸೇರ್ಪಡೆಗೆ ಮನವಿ ಪತ್ರ ಸ್ವೀಕಾರ ಸಂಪೂರ್ಣಗೊಂಡ ನಂತರವೂ, ಅವರ ಹೆಸರುಗಳನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ ಎಂದು ಸಂಜಯ್ ಯಾದವ್ ಅವರು ಈ ವೇಳೆ ಆರೋಪಿಸಿದರು.
ಇದಕ್ಕೂ ಮುನ್ನ, ಬುಧವಾರ ಬೆಳಗ್ಗೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ‘ಮತಗಳ್ಳತನ’ ವಿಡಿಯೊ ಅಭಿಯಾನದಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, ಬಿಜೆಪಿಯ ಹಿಡಿತದಿಂದ ಸಾಂವಿಧಾನಿಕ ಸಂಸ್ಥೆಗಳನ್ನು ಜನರು ರಕ್ಷಿಸಬೇಕು ಹಾಗೂ ಇಂತಹ ನಡೆಗಳ ವಿರುದ್ಧ ತಮ್ಮ ಧ್ವನಿಯನ್ನು ಎತ್ತಬೇಕು ಎಂದು ಕರೆ ನೀಡಿದರು.







