"ಮತಕ್ಕಾಗಿ ವೇದಿಕೆ ಮೇಲೆ ನೃತ್ಯ ಮಾಡಬಲ್ಲರು" : ಬಿಹಾರ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿಯನ್ನು ಟೀಕಿಸಿದ ರಾಹುಲ್ ಗಾಂಧಿ

Photo| PTI
ಹೊಸದಿಲ್ಲಿ : ನೀವು ನರೇಂದ್ರ ಮೋದಿ ಅವರಿಗೆ ಮತಕ್ಕಾಗಿ ನೃತ್ಯ ಮಾಡಲು ಹೇಳಿದರೆ ಅವರು ವೇದಿಕೆ ಮೇಲೆ ನೃತ್ಯ ಮಾಡುತ್ತಾರೆ ಎಂದು ಬಿಹಾರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ.
ಮುಜಾಫರ್ಪುರದಲ್ಲಿ ಆರ್ಜೆಡಿ ನಾಯಕ ಮತ್ತು ಇಂಡಿಯಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರೊಂದಿಗೆ ಜಂಟಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದರು. ಅವರು "ಮತಗಳಿಗಾಗಿ ಏನು ಬೇಕಾದರೂ ಮಾಡುತ್ತಾರೆ" ಎಂದು ಟೀಕಿಸಿದರು.
ಛತ್ ಪೂಜೆಯ ಸಂದರ್ಭದಲ್ಲಿ ಯಮುನಾ ನದಿಯಲ್ಲಿ ಸ್ನಾನ ಮಾಡುವುದಾಗಿ ಘೋಷಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಲು ಬಯಸಿದ ನಾಟಕವನ್ನು ನೀವೆಲ್ಲರೂ ನೋಡಿರಬೇಕು. ದಿಲ್ಲಿಯ ಕಲುಷಿತ ಯಮುನಾ ನದಿಯಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿರುವಾಗ ಪ್ರಧಾನ ಮಂತ್ರಿ ʼವಿಶೇಷವಾಗಿ ನಿರ್ಮಿಸಿದ ಕೊಳʼದಲ್ಲಿ ಸ್ನಾನ ಮಾಡಿದರು ಎಂದರು.
20 ವರ್ಷಗಳ ಕಾಲ ಬಿಹಾರವನ್ನು ಆಳ್ವಿಕೆ ಮಾಡಿದರೂ ನಿತೀಶ್ ಕುಮಾರ್ ಹಿಂದುಳಿದ ವರ್ಗಗಳಿಗೆ ಏನನ್ನೂ ಮಾಡಿಲ್ಲ. ಬಿಜೆಪಿ ರಾಜ್ಯವನ್ನು ನಿಯಂತ್ರಿಸಲು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರ ವರ್ಚಸ್ಸನ್ನು ದುರುಪಯೋಗಪಡಿಸಿಕೊಂಡಿದೆ. ರಿಮೋಟ್ ಕಂಟ್ರೋಲ್ ಬಿಜೆಪಿ ಕೈಯಲ್ಲಿದೆ ಎಂದು ರಾಹುಲ್ ಗಾಂಧಿ ಟೀಕಿಸಿದರು.







