ರೈಲ್ವೆ ಉದ್ಯೋಗಿಗಳಿಗೆ 1 ಕೋಟಿ ರೂ. ಅಪಘಾತ ಮೃತ್ಯು ವಿಮೆ

PC : @RailMinIndia
ಹೊಸದಿಲ್ಲಿ, ಸೆ.2: ತನ್ನ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬಗಳಿಗೆ ಗಣನೀಯ ಮೊತ್ತ ವಿಮಾ ಸೌಲಭ್ಯವನ್ನು ಒದಗಿಸುವ ತಿಳುವಳಿಕಾ ಒಪ್ಪಂದಕ್ಕೆ ಭಾರತೀಯ ರೈಲ್ವೆ ಇಲಾಖೆಯು ಸೋಮವಾರ ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆ ಸಹಿಹಾಕಿದೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತಿಯಲ್ಲಿ ಸಹಿಹಾಕಲಾದ ತಿಳುವಳಿಕಾ ಒಪ್ಪಂದದ ಪ್ರಕಾರ, ಎಸ್ಬಿಐ ಜೊತೆ ವೇತನ ಖಾತೆಗಳನ್ನು ಹೊಂದಿರುವ ಉದ್ಯೋಗಿಗಳಿಗೆ ಅವಘಡದಿಂದ ಮೃತಪಟ್ಟಲ್ಲಿ 1 ಕೋಟಿ ರೂ. ವಿಮಾ ಸೌಲಭ್ಯ ದೊರೆಯಲಿದೆ.
ಅವಘಡದಲ್ಲಿನ ಮೃತ್ಯುವಿಗೆ ರೈಲ್ವೆ ಇಲಾಖೆಯ ಗ್ರೂಪ್ ಎ, ಬಿ ಹಾಗೂ ಸಿ ಉದ್ಯೋಗಿಗಳಿಗೆ ಪ್ರಸಕ್ತ ವಿಮಾ ಕವರೇಜ್ ಕ್ರಮವಾಗಿ 1.20 ಲಕ್ಷ ರೂ., 60 ಸಾವಿರ ರೂ. ಹಾಗೂ 30 ಸಾವಿರ ರೂ. ಆಗಿರುತ್ತದೆ.
ಅಲ್ಲದೆ ಎಸ್ಬಿಐ ಜೊತೆ ವೇತನ ಖಾತೆಯನ್ನು ಹೊಂದಿರುವ ಎಲ್ಲಾ ರೈಲ್ವೆ ಉದ್ಯೋಗಿಗಳು ಸಹಜವಾಗಿ ಸಾವನ್ನಪ್ಪಿದಲ್ಲಿ 10 ಲಕ್ಷ ರೂ.ವಿಮಾ ಕವರೇಜ್ ಗೆ ಅರ್ಹರಾಗಿರುತ್ತಾರೆ. ಅವರು ಇದಕ್ಕಾಗಿ ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ ಅಥವಾ ಯಾವುದೇ ವೈದ್ಯಕೀಯ ತಪಾಸಣೆಗೆ ಒಳಗಾಗಿರಬೇಕಿಲ್ಲ ಎಂದು ರೈಲ್ವೆ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.





