4,033 ಕೋಟಿ ರೂ. ವೆಚ್ಚದ ರೈಲು ಮಾರ್ಗ ಯೋಜನೆ; ಭಾರತ-ಭೂತಾನ್ ಘೋಷಣೆ

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ | Photo Credit : PTI
ಹೊಸದಿಲ್ಲಿ, ಸೆ. 29: ಭಾರತ ಹಾಗೂ ಭೂತಾನ್ ಅನ್ನು ಸಂಪರ್ಕಿಸುವ 2 ಹೊಸ ರೈಲು ಯೋಜನೆಗಳನ್ನು ಭಾರತ ಸೋಮವಾರ ಘೋಷಿಸಿದೆ.
ಈ ಯೋಜನೆಗಳೆಂದರೆ ಅಸ್ಸಾಂನ ಕೊಕ್ರಝಾರ್-ಗೆಲೆಫು ರೈಲು ಮಾರ್ಗ ಯೋಜನೆ ಹಾಗೂ ಪಶ್ಚಿಮಬಂಗಾಳದ ಬನರ್ಹಾತ್-ಸಮ್ ತ್ಸೆ ರೈಲು ಮಾರ್ಗ ಯೋಜನೆ. 89 ಕಿ.ಮೀ. ವ್ಯಾಪ್ತಿಯ ಈ ರೈಲು ಮಾರ್ಗ ಯೋಜನೆಗಳ ಅಂದಾಜು ವೆಚ್ಚ 4,033 ಕೋ.ರೂ. ಆಗಿದೆ. ಈ ಎರಡು ಯೋಜನೆಗಳು ಉಭಯ ದೇಶಗಳ ನಡುವಿನ ರೈಲು ಸಂಪರ್ಕಗಳ ಮೊದಲ ಹಂತವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಭೂತಾನ್ ಗೆ ಭೇಟಿ ನೀಡಿದ ಸಂದರ್ಭ ಈ ಯೋಜನೆಯ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿತ್ತು.
ಭಾರತವು ಭೂತಾನ್ ನ ಅತಿ ದೊಡ್ಡ ಪಾಲುದಾರ ರಾಷ್ಟ್ರ. ಭೂತಾನ್ ನ ಹೆಚ್ಚಿನ ಎಕ್ಸಿಮ್ ವ್ಯಾಪಾರ ಭಾರತದ ಬಂದರುಗಳ ಮೂಲಕವೇ ನಡೆಯುತ್ತದೆ. ಭೂತಾನ್ನ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಹಾಗೂ ಅಲ್ಲಿನ ಜನರಿಗೆ ಜಾಗತಿಕ ಮಾರುಕಟ್ಟೆಗಳಿಗೆ ಸುಧಾರಿತ ಪ್ರವೇಶವನ್ನು ಕಲ್ಪಿಸಲು ತಡೆ ರಹಿತ ರೈಲು ಮಾರ್ಗ ನಿರ್ಣಾಯಕವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೊಸ 89 ಕಿ.ಮೀ. ರೈಲು ಮಾರ್ಗಗಳು ಭೂತಾನ್ಗೆ ಭಾರತದ 1,50, 000 ಕಿ.ಮೀ. ರೈಲ್ವೆ ಜಾಲದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಿದೆ. ಕೊಕ್ರಝಾರ್-ಗೆಲೆಫು ರೈಲು ಮಾರ್ಗ ಪೂರ್ಣಗೊಳ್ಳಲು 4 ವರ್ಷಗಳು ಬೇಕಾಗಲಿದೆ. ಇದು ಆರು ನಿಲ್ದಾಣಗಳು ಹಾಗೂ ಎರಡು ವಯಾಡಕ್ಟ್, 29 ದೊಡ್ಡ ಸೇತುವೆಗಳು, 65 ಸಣ್ಣ ಸೇತುವೆಗಳು, 2 ಗೂಡ್ಸ್ ಶೆಡ್, 1 ಫ್ಲೈಓವರ್ ಹಾಗೂ 39 ಅಂಡರ್ ಪಾಸ್ ಗಳನ್ನು ಒಳಗೊಂಡಿರಲಿದೆ ಎಂದು ಅವರು ತಿಳಿಸಿದ್ದಾರೆ.
ಬನಾರ್ಹತ್-ಸಮ್ ತ್ಸೆ ರೈಲು ಮಾರ್ಗಕ್ಕೆ 577 ಕೋ.ರೂ. ವೆಚ್ಚವಾಗಲಿದೆ. ಇದು ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆ 2 ನಿಲ್ದಾಣ, 1 ಮುಖ್ಯ ಫ್ಲೈಓವರ್, 27 ಸಣ್ಣ ಫ್ಲೈ ಓವರ್, 37 ಅಂಡರ್ ಪಾಸ್ಗಳನ್ನು ಒಳಗೊಂಡಿರಲಿದೆ ಎಂದು ಅವರು ಹೇಳಿದ್ದಾರೆ.







