ಮುಂಬೈ ಲೋಕಲ್ ಟ್ರೈನ್ ಅಪಘಾತ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

PC : PTI
ನಾಗ್ಪುರ: ಥಾಣೆ ಜಿಲ್ಲೆಯಲ್ಲಿ ಸಂಭವಿಸಿದ ಲೋಕಲ್ ಟ್ರೈನ್ ಅಪಘಾತದಲ್ಲಿ ಐವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ಎಂದು ಸೋಮವಾರ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಾಲ್ ಆಗ್ರಹಿಸಿದ್ದಾರೆ.
ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ವಿತರಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಸೋಮವಾರ ಬೆಳಗ್ಗೆ ಕಚೇರಿಯ ಅವಧಿಯಲ್ಲಿ ಲೋಕಲ್ ಟ್ರೈನ್ ಕಿಕ್ಕಿರಿದು ತುಂಬಿದ್ದ ಪರಿಣಾಮ, ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಸರಕಾರಿ ರೈಲ್ವೆ ಪೊಲೀಸ್ ಸೇರಿದಂತೆ 5 ಮಂದಿ ಪ್ರಯಾಣಿಕರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ.
ಈ ಕುರಿತು ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಪ್ಕಾಲ್, ಲೋಕಲ್ ಟ್ರೈನ್ ಅಪಘಾತಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಹೊಣೆ ಎಂದು ಆರೋಪಿಸಿದ್ದಾರೆ.
ಕೇಂದ್ರ ರೈಲ್ವೆ ಸಚಿವರು ರೈಲ್ವೆ ಸೌಲಭ್ಯಗಳ ಸುಧಾರಣೆ ಕುರಿತು ನಿರ್ಲಕ್ಷ್ಯ ಧೋರಣೆ ತಳೆದಿದ್ದು, ಅವರು ರಾಜೀನಾಮೆ ನೀಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಈ ಸಂಬಂಧ ಎಕ್ಸ್ ನಲ್ಲಿ ಮೃತರಿಗೆ ಸಂತಾಪ ಸೂಚಿಸಿರುವ ಹರ್ಷವರ್ಧನ್ ಸಪ್ಕಾಲ್, “ಕಳೆದ 11 ವರ್ಷಗಳಲ್ಲಿ ಮುಂಬೈ ಜನರು ಮುಂಬೈ ನಿವಾಸಿಗಳ ಸುಗಮ ಪ್ರಯಾಣ ಹಾಗೂ ಮೂಲಭೂತ ಸೌಕರ್ಯಗಳ ಸುಧಾರಣೆಯ ಕುರಿತು ಖಾಲಿ ಮಾತುಗಳನ್ನಷ್ಟೇ ಕೇಳುತ್ತಾ ಬಂದಿದ್ದಾರೆ” ಎಂದೂ ವ್ಯಂಗ್ಯವಾಡಿದ್ದಾರೆ.
ಸೌಲಭ್ಯಗಳು ಹಾಗೂ ಅಭಿವೃದ್ಧಿಯನ್ನು ಒದಗಿಸುವ ಹೆಸರಿನಲ್ಲಿ ಮಹಾರಾಷ್ಟ್ರವು ಟೆಂಡರ್ ಗಳನ್ನು ಉಡುಗೊರೆ ನೀಡುವ ಹಾಗೂ ಕಮಿಷನ್ ಹೊಡೆಯುವ ಆಟಕ್ಕೆ ಸಾಕ್ಷಿಯಾಗುತ್ತಿದೆ ಎಂದು ಅವರು ದೂರಿದ್ದಾರೆ. ಈ ಭ್ರಷ್ಟಾಚಾರಕ್ಕೆ ಮಹಾರಾಷ್ಟ್ರದ ನಾಗರಿಕರು ತಮ್ಮ ಜೀವದ ಬೆಲೆ ತೆರಬೇಕಾಗಿ ಬಂದಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಸರಕಾರ ಈ ಕೂಡಲೇ ಎಚ್ಚೆತ್ತುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಸ್ಥಗಿತಗೊಳಿಸಬೇಕು ಹಾಗೂ ಲೋಕಲ್ ಟ್ರೈನ್ ಪ್ರಯಾಣದ ವೇಳೆ ಮುಂಬೈ ನಿವಾಸಿಗಳು ತಮ್ಮ ಜೀವ ಕಳೆದುಕೊಳ್ಳದಂತೆ ಖಾತರಿ ಪಡಿಸಲು ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.