60 ನಿಲ್ದಾಣಗಳಲ್ಲಿ ನೂಕುನುಗ್ಗಲು ನಿಯಂತ್ರಣಕ್ಕೆ ಹೊಸ ಕ್ರಮಗಳ ಜಾರಿ; ರೈಲ್ವೇ ಸಚಿವಾಲಯ ನಿರ್ಧಾರ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಹಬ್ಬದ ಋತುವಿನಲ್ಲಿ ಮತ್ತು ಮಹಾಕುಂಭದಂಥ ಸಂದರ್ಭಗಳಲ್ಲಿ ದೇಶಾದ್ಯಂತದ 60 ರೈಲು ನಿಲ್ದಾಣಗಳಲ್ಲಿ ನೂಕುನುಗ್ಗಲು ನಿಯಂತ್ರಿಸಲು ಹೊಸ ಕ್ರಮಗಳನ್ನು ಜಾರಿಗೊಳಿಸಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ.
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯೊಂದರಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ಎಎನ್ಐ ವರದಿ ಮಾಡಿದೆ.
ನೂಕುನುಗ್ಗಲನ್ನು ನಿವಾರಿಸಲು ಈ ನಿಲ್ದಾಣಗಳ ಹೊರಗೆ ಶಾಶ್ವತ ಕಾಯುವ ಸ್ಥಳಗಳನ್ನು ನಿರ್ಮಿಸಲಾಗುವುದು. ಈ ವ್ಯವಸ್ಥೆಯಲ್ಲಿ, ರೈಲುಗಳು ಬಂದಾಗ ಮಾತ್ರ ಪ್ಲಾಟ್ಫಾರ್ಮ್ಗಳಿಗೆ ಹೋಗಲು ಪ್ರಯಾಣಿಕರಿಗೆ ಅವಕಾಶ ನೀಡಲಾಗುವುದು.
ಈ ಯೋಜನೆಯನ್ನು ಪ್ರಾಯೋಗಿಕವಾಗಿ ಈಗಾಗಲೇ ಹೊಸದಿಲ್ಲಿ, ಆನಂದವಿಹಾರ್, ವಾರಣಾಸಿ, ಅಯೋಧ್ಯೆ ಮತ್ತು ಪಾಟ್ನಾ ರೈಲು ನಿಲ್ದಾಣಗಳಲ್ಲಿ ಜಾರಿಗೆ ತರಲಾಗಿದೆ.
ಈ ನಿಲ್ದಾಣಗಳಿಗೆ ಜನರ ಪ್ರವೇಶವನ್ನು ಸಂಪೂರ್ಣವಾಗಿ ನಿಯಂತ್ರಿಸುವ ವ್ಯವಸ್ಥೆಯನ್ನೂ ರೈಲ್ವೇ ಇಲಾಖೆಯು ಜಾರಿಗೆ ತರಲಾಗುವುದು. ಇದರ ಪ್ರಕಾರ, ಕಾದಿರಿಸಿದ ಟಿಕೆಟ್ಗಳನ್ನು ಹೊಂದಿದವರಿಗೆ ಮಾತ್ರ ಪ್ಲಾಟ್ಫಾರ್ಮ್ಗಳಿಗೆ ಹೋಗಲು ಬಿಡಲಾಗುವುದು ಮತ್ತು ಇತರ ಎಲ್ಲಾ ಅನಧಿಕೃತ ಪ್ರವೇಶ ದ್ವಾರಗಳನ್ನು ಮುಚ್ಚಲಾಗುವುದು ಎಂದು ಎಎನ್ಐ ವರದಿ ಮಾಡಿದೆ.
ಇದರ ಜೊತೆಗೆ, ಎಲ್ಲಾ ರೈಲು ನಿಲ್ದಾಣಗಳಲ್ಲಿ 12 ಮೀಟರ್ ಮತ್ತು 6 ಮೀಟರ್ ಅಗಲದ ಹೊಸ ಪಾದಚಾರಿ ಮೇಲ್ಸೇತುವೆಗಳನ್ನೂ ನಿರ್ಮಿಸಲಾಗುವುದು. ಅಗಲವಾದ ಕಾಲು ಮೇಲ್ಸೇತುವೆಗಳು ಪರಿಣಾಮಕಾರಿಯಾಗಿವೆ ಎನ್ನುವುದು ಮಹಾ ಕುಂಭಮೇಳದ ಅವಧಿಯಲ್ಲಿ ಸಾಬೀತಾಗಿದೆ. ಈ ಮೇಲ್ಸೇತುವೆಗಳಲ್ಲಿ ನೂಕುನುಗ್ಗಲು ನಿಯಂತ್ರಣಕ್ಕೆ ಕಂಬಿಗಳೂ ಇರುತ್ತವೆ.







