ಜುಲೈ 1ರಿಂದ ತತ್ಕಾಲ್ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಆಧಾರ್ ದೃಢೀಕರಣ ಕಡ್ಡಾಯ : ರೈಲ್ವೆ ಸಚಿವಾಲಯ ಪ್ರಕಟನೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಜುಲೈ 1ರಿಂದ ಆಧಾರ್ ದೃಢೀಕೃತ ಬಳಕೆದಾರರು ಮಾತ್ರ ತತ್ಕಾಲ್ ಯೋಜನೆ ಅಡಿಯಲ್ಲಿ ರೈಲು ಟಿಕೆಟ್ ಬುಕ್ ಮಾಡಬಹುದು ಎಂದು ರೈಲ್ವೆ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.
ತತ್ಕಾಲ್ ಯೋಜನೆಯ ಪ್ರಯೋಜನಗಳನ್ನು ಸಾಮಾನ್ಯ ಜನರು ಕೂಡ ಪಡೆದುಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತನ್ನ ಜೂನ್ 10ರ ಸುತ್ತೋಲೆಯಲ್ಲಿ ಎಲ್ಲಾ ವಲಯಗಳಿಗೆ ತಿಳಿಸಿದೆ.
ಜುಲೈ 1ರಿಂದ ಅನ್ವಯವಾಗುವಂತೆ ದೃಢೀಕೃತ ಬಳಕೆದಾರರು ಮಾತ್ರ ತತ್ಕಾಲ್ ಯೋಜನೆ ಅಡಿಯಲ್ಲಿ ಟಿಕೆಟ್ಗಳನ್ನು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್ (ಐಆರ್ಸಿಟಿಸಿ) ವೆಬ್ಸೈಟ್/ಅದರ ಆ್ಯಪ್ ಮೂಲಕ ಬುಕ್ ಮಾಡಬಹುದು.
ಜುಲೈ 15ರಿಂದ ತತ್ಕಾಲ್ ಯೋಜನೆ ಅಡಿ ರೈಲು ಟಿಕೆಟ್ ಬುಕ್ ಮಾಡಲು ಆಧಾರ್ ಆಧಾರಿತ ಒಟಿಪಿ ದೃಢೀಕರಣವನ್ನು ಕೂಡ ಕಡ್ಡಾಯ ಮಾಡಲಾಗುವುದು ಎಂದು ಅದು ತಿಳಿಸಿದೆ.
ತತ್ಕಾಲ್ ರೈಲು ಟಿಕೆಟ್ ಅನ್ನು ಭಾರತೀಯ ರೈಲ್ವೆ/ಅಧಿಕೃತ ಏಜೆಂಟ್ಗಳ ಗಣಿಕೀಕೃತ ಪಿಆರ್ಎಸ್ (ಪ್ರಯಾಣಿಕರ ಕಾಯ್ದಿರಿಸುವ ವ್ಯವಸ್ಥೆ) ಕೌಂಟರ್ ಮೂಲಕ ಬುಕ್ ಮಾಡಲು ಲಭ್ಯವಿರುತ್ತದೆ. ಆದರೆ, ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಬಳಕೆದಾರರು ಒದಗಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ ಒಟಿಪಿಯನ್ನು ದೃಢೀಕರಿಸಿದ ಬಳಿಕ ಮಾತ್ರವೇ ಟಿಕೆಟ್ ಬುಕ್ ಮಾಡಲು ಸಾಧ್ಯ. ಇದನ್ನು ಜುಲೈ 15ರಿಂದ ಅನುಷ್ಠಾನಗೊಳಿಸಲಾಗುವುದು ಎಂದು ಸುತ್ತೋಲೆ ಹೇಳಿದೆ.
ತತ್ಕಾಲ್ ಬುಕಿಂಗ್ ತೆರೆದ ಮೊದಲ 30 ನಿಮಿಷಗಳವರೆಗೆ ಭಾರತೀಯ ರೈಲ್ವೆಯ ಅಧಿಕೃತ ಟಿಕೆಟ್ ಏಜೆಂಟರಿಗೆ ಟಿಕೆಟ್ ಬುಕ್ ಮಾಡಲು ಅವಕಾಶವಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ, ಹವಾನಿಯಂತ್ರಿತ ಬೋಗಿಗಳಿಗೆ ಬೆಳಗ್ಗೆ 10ರಿಂದ 10.30ರವರೆಗೆ ಹಾಗೂ ಹವಾನಿಯಂತ್ರಿತವಲ್ಲದ ಬೋಗಿಗಳಿಗೆ ಬೆಳಗ್ಗೆ 11ರಿಂದ 11.30ರ ವರೆಗೆ ಟಿಕೆಟ್ ಬುಕ್ ಮಾಡಲು ನಿರ್ಬಂಧ ಇರುತ್ತದೆ ಎಂದು ಸುತ್ತೋಲೆ ಹೇಳಿದೆ.
ವ್ಯವಸ್ಥೆಗೆ ಅಗತ್ಯದ ಬದಲಾವಣೆಗಳನ್ನು ಮಾಡುವಂತೆ ಹಾಗೂ ಈ ಬದಲಾವಣೆಗಳ ಕುರಿತು ಎಲ್ಲಾ ವಲಯ ರೈಲ್ವೆಗಳಿಗೆ ಮಾಹಿತಿ ನೀಡುವಂತೆ ಸಚಿವಾಲಯ ಕೇಂದ್ರ ರೈಲ್ವೆ ಮಾಹಿತಿ ವ್ಯವಸ್ಥೆ (ಸಿಆರ್ಐಎಸ್) ಹಾಗೂ ಐಆರ್ಸಿಟಿಸಿಗೆ ನಿರ್ದೇಶಿಸಿದೆ.







