ಅಣ್ಣಾಮಲೈಯನ್ನು ‘ರಸಮಲೈ’ ಎಂದು ಕರೆದ ರಾಜ್ ಠಾಕ್ರೆ

ರಾಜ್ ಠಾಕ್ರೆ / ಕೆ.ಅಣ್ಣಾಮಲೈ (Photo: PTI)
ಮುಂಬೈ: ಬಿಜೆಪಿ ನಾಯಕ ಕೆ.ಅಣ್ಣಾಮಲೈ ಅವರನ್ನು ‘ರಸಮಲೈ’ ಎಂದು ಕರೆದು ವಿವಾದವನ್ನು ಹುಟ್ಟುಹಾಕಿರುವ ಮಹಾರಾಷ್ಟ್ರ ನವನಿರ್ಮಾಣ ಸಮಿತಿಯ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆಯವರು, ಮುಂಬೈ ಕುರಿತು ಮಾತನಾಡುವ ಅವರ ಹಕ್ಕನ್ನು ಪ್ರಶ್ನಿಸಿದ್ದಾರೆ.
ಅಣ್ಣಾಮಲೈ ಅವರನ್ನು ಅಣಕಿಸುತ್ತ ಠಾಕ್ರೆ, ಇತ್ತೀಚಿಗೆ ತಮಿಳುನಾಡಿನಿಂದ ಯಾರೋ ‘ರಸಮಲೈ’ ಮುಂಬೈಗೆ ಬಂದಿದ್ದರು ಮತ್ತು ಬಾಂಬೆ ಮಹಾರಾಷ್ಟ್ರದ ನಗರವಲ್ಲ, ಮುಂಬೈಗೂ ಮಹಾರಾಷ್ಟ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಅವರು ಯಾರು? ಅವರಿಗೂ ಮುಂಬೈಗೂ ಏನು ಸಂಬಂಧವಿದೆ ಮತ್ತು ಅವರು ಇಲ್ಲಿಗೇಕೆ ಬಂದಿದ್ದರು? ಅದಕ್ಕಾಗಿಯೇ ಬಾಳಾಸಾಹೇಬರು ‘ಹಟಾವೊ ಲುಂಗಿ ಬಜಾವೊ ಪುಂಗಿ’ ಎಂದು ಹೇಳಿದ್ದರು ಎಂದರು.
ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಗಾಗಿ (ಬಿಎಂಸಿ) ಪ್ರಚಾರದಲ್ಲಿ ಭಾಗಿಯಾಗಿದ್ದ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಅಣ್ಣಾಮಲೈ ‘ಬಾಂಬೆ ಮಹಾರಾಷ್ಟ್ರದ ನಗರವಲ್ಲ, ಅದು ಅಂತರರಾಷ್ಟ್ರೀಯ ನಗರ’ ಎಂದು ಹೇಳಿದ ಬಳಿಕ ವಿವಾದ ಹುಟ್ಟಿಕೊಂಡಿದೆ. ಈ ಹೇಳಿಕೆ ಪ್ರತಿಪಕ್ಷ ನಾಯಕರನ್ನು ಕೆರಳಿಸಿದೆ ಎನ್ನಲಾಗಿದೆ.
ಅಣ್ಣಾಮಲೈರನ್ನು ಸಮರ್ಥಿಸಿಕೊಂಡ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅವರ ಹೇಳಿಕೆಯನ್ನು ತಿರುಚಲಾಗಿದೆ ಮತ್ತು ಅನಗತ್ಯವಾಗಿ ದೊಡ್ಡ ವಿಷಯವನ್ನಾಗಿ ಮಾಡಲಾಗಿದೆ. ಅಣ್ಣಾಮಲೈ ಮಹಾರಾಷ್ಟ್ರದವರಲ್ಲ, ರಾಷ್ಟ್ರೀಯ ಬಿಜೆಪಿ ನಾಯಕರೂ ಅಲ್ಲ. ಆದರೂ ಅವರ ಹೇಳಿಕೆಗೆ ಇಷ್ಟೊಂದು ಪ್ರಾಮುಖ್ಯ ನೀಡಲಾಗಿದೆ ಎಂದು ಹೇಳಿದರು.
ಮುಂಬೈ ಅಂತರರಾಷ್ಟ್ರೀಯ ನಗರ ಎಂದು ಅಣ್ಣಾಮಲೈ ಹೇಳಿರುವುದು ನಿಜ, ಆದರೆ ಮುಂಬೈ ಮಹಾರಾಷ್ಟ್ರದ ನಗರವಲ್ಲ ಎಂದು ಅವರು ಹೇಳಿರಲಿಲ್ಲ. ಮುಂಬೈ ಇಲ್ಲಿ ವಾಸವಾಗಿರುವ ಎಲ್ಲ ಜನರಿಗೆ ಸೇರಿದೆ ಎಂದು ಹೇಳಲು ಅವರು ಬಯಸಿದ್ದರು ಮತ್ತು ಅದು ನಿಜವೂ ಹೌದು ಎಂದ ಫಡ್ನವೀಸ್, ಅಣ್ಣಾಮಲೈ ಅವರ ಹಿಂದಿ ಚೆನ್ನಾಗಿಲ್ಲ, ಹೀಗಾಗಿ ಅವರು ಹಲವು ಬಾರಿ ‘ಬಾಂಬೆ’ ಪದವನ್ನು ಬಳಸಿದ್ದಾರೆ, ತಿಳಿಯದೆ ಹಾಗೆ ಮಾಡಿದ್ದಾರೆ. ಅವರ ಹೇಳಿಕೆಗೆ ಹೆಚ್ಚಿನ ಗಮನ ನೀಡಬೇಕಿಲ್ಲ ಎಂದು ಹೇಳಿದರು.
ಅಣ್ಣಾಮಲೈ ಹೇಳಿಕೆಗೂ ಮುಂಬೈಯನ್ನು ಮಹಾರಾಷ್ಟ್ರದಿಂದ ಪ್ರತ್ಯೇಕಿಸಲು ಬಯಸಿರುವ ಉನ್ನತ ಬಿಜೆಪಿ ನಾಯಕರ ಪಿತೂರಿಗೂ ತಳುಕು ಹಾಕಿದ ಠಾಕ್ರೆ, ಅದಕ್ಕಾಗಿಯೇ ಅಣ್ಣಾಮಲೈ ಮರಾಠಿ ಜನರು ಮತ್ತು ಮಹಾರಾಷ್ಟ್ರವನ್ನು ಗುರಿಯಾಗಿಸಿಕೊಂಡು ಇಂತಹ ಹೇಳಿಕೆಯನ್ನು ನೀಡಿದ್ದಾರೆ ಎಂದು ಆರೋಪಿಸಿದರು.
‘ನಾವು ಹೋರಾಟವನ್ನು ಮುಂದುವರಿಸುತ್ತೇವೆ ಮತ್ತು ಮುಂಬೈಯನ್ನು ಮಹಾರಾಷ್ಟ್ರದಿಂದ ಬೇರ್ಪಡಿಸಲು ಅವಕಾಶ ನೀಡುವುದಿಲ್ಲ. 106 ಜನರು ಮುಂಬೈಗಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ, ಆ ಹುತಾತ್ಮರ ಬಲಿದಾನಗಳು ವ್ಯರ್ಥವಾಗುವುದಿಲ್ಲ. ಜನರು ಜಾಗ್ರತರಾಗಿರಬೇಕು ಮತ್ತು ಹೆಚ್ಚಿನ ಯೋಜನೆಗಳನ್ನು ಯಾರು, ಯಾವ ಪ್ರದೇಶದಲ್ಲಿ ಕಬಳಿಸುತ್ತಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ನಿರ್ಧಾರ ಪ್ರಕ್ರಿಯೆಯಲ್ಲಿ ‘ಅಭಿಪ್ರಾಯದ ಹಕ್ಕು’ ಹೊಂದಿರಲು ಬಿಎಂಸಿ ಚುನಾವಣೆ ಮುಖ್ಯವಾಗಿದೆ’ ಎಂದು ಠಾಕ್ರೆ ಹೇಳಿದರು.







