‘ಬಲವಂತ’ದಿಂದ ಮರಾಠಿ ಕಲಿಯಲ್ಲ ಎಂದು ಸವಾಲು: ಮುಂಬೈನ ಉದ್ಯಮಿ ಕಚೇರಿಗೆ ಎಂಎನ್ಎಸ್ ಬೆಂಬಲಿಗರಿಂದ ಕಲ್ಲುತೂರಾಟ

Photo : Videograb | X
ಮುಂಬೈ: ಮರಾಠಿ ಭಾಷೆಯನ್ನು ಕಲಿಯಬೇಕೆಂಬ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರ ಬಲವಂತದ ಬೆದರಿಕೆಗೆ ತಾನು ಮಣಿಯಲಾರೆ ಎಂದು ರಾಜ್ ಠಾಕ್ರೆ ಅವರಿಗೆ ಬಹಿರಂಗ ಸವಾಲೊಡ್ಡಿದ್ದ ಕೆಡಿಯೊನೊಮಿಕ್ಸ್ ಸಂಸ್ಥೆಯ ಮಾಲಕ ಸುಶೀಲ್ ಕೆಡಿಯಾ ಅವರ ಮುಂಬೈ ಕಚೇರಿಗೆ ಎಂಎನ್ಎಸ್ ಬೆಂಬಲಿಗರು ಶನಿವಾರ ಕಲ್ಲೆಸೆದು, ದಾಂಧಲೆ ನಡೆಸಿದ್ದಾರೆ.
ಭದ್ರತಾ ಸಿಬ್ಬಂದಿಯ ಉಪಸ್ಥಿತಿಯ ಹೊರತಾಗಿಯೂ ಎಂಎನ್ಎಸ್ ಕಾರ್ಯಕರ್ತರ ಗುಂಪೊಂದು ಕೆಡಿಯಾ ಅವರ ಕಚೇರಿಯ ಮುಂಭಾಗದಲ್ಲಿರುವ ಗಾಜಿನ ಪ್ರವೇಶದ್ವಾರಕ್ಕೆ ಕಲ್ಲೆಸೆಯುತ್ತಿರುವ ದೃಶ್ಯಗಳು ವೀಡಿಯೊದಲ್ಲಿ ಕಾಣಿಸಿದೆ. ಆನಂತರ ಕಾವಲುಗಾರರು ಕಚೇರಿಯ ಬಾಗಿಲಿನ ಶಟರ್ ಎಳೆದಾಗ , ಎಂಎನ್ಎಸ್ ಕಾರ್ಯಕರ್ತರು ‘ಜೈಮಹಾರಾಷ್ಟ್ರ ’ ಘೋಷಣೆ ಕೂಗುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಘಟನೆಗೆ ಸಂಬಂಧಿಸಿ ಎಂಎನ್ಎಸ್ನ ಐವರು ಕಾರ್ಯಕರ್ತರನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
‘ಮುಂಬೈಯಲ್ಲಿ 30 ವರ್ಷಗಳಿಂದ ವಾಸವಾಗಿರುವ ಹೊರತಾಗಿಯೂ ನನಗೆ ಮರಾಠಿ ಚೆನ್ನಾಗಿ ತಿಳಿದಿಲ್ಲ. ಆದರೆ ನಿಮ್ಮ ಘೋರ ದುರ್ವರ್ತನೆಯಿಂದಾಗಿ, ನಿಮ್ಮಂತಹ ವ್ಯಕ್ತಿಗಳು ಮರಾಠಿ ಮಾಣುಸ್ (ಮರಾಠಿ ಜನತೆ)ನ ಸಂರಕ್ಷಣೆ ಮಾಡುವವರಂತೆ ವರ್ತಿಸುತ್ತಾರೋ ಅಲ್ಲಿಯವರೆಗೆ ನಾನು ಮರಾಠಿ ಕಲಿಯುವುದಿಲ್ಲ. ಏನು ಮಾಡುತ್ತೀರಿ ಹೇಳಿ’ ಎಂದು ಕೆಡಿಯಾ ಎಕ್ಸ್ನಲ್ಲಿ ಬರೆದಿರುವುದು ಎಂಎನ್ಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.
ಮುಂಬೈನಲ್ಲಿ ಇತ್ತೀಚೆಗೆ ಎಂಎನ್ಎಸ್ ಕಾರ್ಯಕರ್ತರಿಂದ ಮರಾಠಿಯೇತರ ಭಾಷಿಕರ ಮೇಲೆ ಸರಣಿ ದಾಳಿಗಳು ನಡೆದಿರುವ ಹಿನ್ನೆಲೆಯಲ್ಲಿ ಖಿನ್ನನಾಗಿ ತಾನು ಹಾಗೆ ಟ್ವೀಟ್ ಮಾಡಿದ್ದಾಗಿ ಕೇಡಿಯಾ ಅವರು ಶನಿವಾರ ಬೆಳಗ್ಗೆ ತಿಳಿಸಿದ್ದರು.
ತಾನು ನೀಡಿದ್ದ ಪ್ರತಿಕ್ರಿಯೆ ಅತಿಯಾಯಿತೆಂದು ಒಪ್ಪಿಕೊಂಡ ಅವರು, ನನಗೆ ನನ್ನ ತಪ್ಪಿನ ಅರಿವಾಗಿದೆ ಹಾಗೂ ಅದನ್ನು ಸರಿಪಡಿಸಲು ಬಯಸುತ್ತಿದ್ದೇನೆ ಎಂದರು.
Do note @RajThackeray I dont know Marathi properly even after living for 30 years in Mumbai & with your gross misconduct I ahve made it a resolve that until such people as you are allowed to pretend to be taking care of Marathi Manus I take pratigya I wont learn Marathi. Kya…
— Sushil Kedia (@sushilkedia) July 3, 2025
I request @RajThackeray Ji to consider my humble submission. pic.twitter.com/i8zGszgNtW
— Sushil Kedia (@sushilkedia) July 5, 2025