"ಅಮಾನತುಗೊಳಿಸಿದರೆ ಸುಮ್ಮನಿರುವುದಿಲ್ಲ, ಪಕ್ಷದಲ್ಲಿರುವ ಪ್ರತಿಯೊಬ್ಬರ ಅಸಲಿಯತ್ತನ್ನು ಬಹಿರಂಗಪಡಿಸುತ್ತೇನೆ": ಸ್ವಪಕ್ಷದ ವಿರುದ್ಧವೇ ಬಿಜೆಪಿ ಶಾಸಕ ರಾಜಾ ಸಿಂಗ್ ಆಕ್ರೋಶ

ಬಿಜೆಪಿ ಶಾಸಕ ರಾಜಾ ಸಿಂಗ್ (Photo: Facebook/RajaSinghOfficial)
ಹೈದರಾಬಾದ್: ನನ್ನನ್ನು ಅಮಾನತುಗೊಳಿಸಿದರೆ ಸುಮ್ಮನಿರುವುದಿಲ್ಲ, ಪಕ್ಷದಲ್ಲಿರುವ ಪ್ರತಿಯೊಬ್ಬರ ಅಸಲಿಯತ್ತನ್ನು ಬಹಿರಂಗಪಡಿಸುತ್ತೇನೆ ಎಂದು ಬಿಜೆಪಿ ಶಾಸಕ ರಾಜಾ ಸಿಂಗ್ ಸ್ವಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು deccanchronicle.com ವರದಿ ಮಾಡಿದೆ.
ಪ್ಯಾಕೇಜ್ಗಳನ್ನು ನೀಡಿದರೆ ಪಕ್ಷದ ಕೆಲವು ನಾಯಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಹೇಳಿಕೆ ಹಿನ್ನೆಲೆ ಶಾಸಕ ರಾಜಾ ಸಿಂಗ್ಗೆ ಬಿಜೆಪಿ ನೋಟಿಸ್ ನೀಡುವ ಸಾಧ್ಯತೆ ಇದೆ.
ಈ ಕುರಿತು ಪ್ರತಿಕ್ರಿಯಿಸಿದ ಗೋಶಮಹಲ್ ಶಾಸಕ ರಾಜಾ ಸಿಂಗ್, ನಾನು ಯಾವುದೇ ನೋಟಿಸ್ಗಳಿಗೆ ಹೆದರುವುದಿಲ್ಲ ಮತ್ತು ಪಕ್ಷವು ನನ್ನನ್ನು ಅಮಾನತುಗೊಳಿಸಬಹುದು. ಅವರು ನನ್ನನ್ನು ಅಮಾನತುಗೊಳಿಸಿದರೆ ನಾನು ಸುಮ್ಮನಿರುವುದಿಲ್ಲ, ಪಕ್ಷದಲ್ಲಿರುವ ಪ್ರತಿಯೊಬ್ಬರ ಅಸಲಿಯತ್ತನ್ನೂ ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.
ಶಾಸಕರು ಮತ್ತು ಸಂಸದರ ಗುಂಪೊಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೊಂದಿಗೆ ರಹಸ್ಯ ಸಭೆಗಳನ್ನು ನಡೆಸುತ್ತಿದೆ. ಒಂದು ನಿರ್ದಿಷ್ಟ ಸಮುದಾಯ ಪಕ್ಷದಲ್ಲಿ ಪ್ರಾಬಲ್ಯ ಹೊಂದಿದೆ. ಪ್ಯಾಕೇಜ್ ನೀಡಿದರೆ ಅವರು ಕಾಂಗ್ರೆಸ್ ಸೇರಬಹುದು ಎಂದು ಶಾಸಕ ರಾಜಾ ಸಿಂಗ್ ಹೇಳಿದ್ದರು.





