ರಾಜಸ್ಥಾನ | ಮೃತ ಸ್ಥಿತಿಯಲ್ಲಿ ಪಾಕಿಸ್ತಾನದ ದಂಪತಿ ಪತ್ತೆ: ನಿರ್ಜಲೀಕರಣದಿಂದ ಮೃತ್ಯು ಶಂಕೆ

PC : NDTV
ಜೈಪುರ: ಎರಡು ದಿನಗಳ ಹಿಂದೆ ಅಂತಾರಾಷ್ಟ್ರೀಯ ಗಡಿ ರೇಖೆಯಿಂದ 11 ಕಿಮೀ ದೂರವಿರುವ ರಾಜಸ್ಥಾನದಲ್ಲಿ ಯುವ ದಂಪತಿಗಳ ಮೃತ ದೇಹ ಪತ್ತೆಯಾದ ನಂತರ, ಈ ದಂಪತಿಗಳು ಪಾಕಿಸ್ತಾನದ ಪ್ರಜೆಗಳಾಗಿದ್ದು, ಭಾರತಕ್ಕೆ ಪರಾರಿಯಾಗಿರುವ ಇವರು ನಿರ್ಜಲೀಕರಣದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಶನಿವಾರ ಕುರಿಗಾಹಿಯೊಬ್ಬ ಈ ದಂಪತಿಗಳ ಮೃತ ದೇಹಗಳನ್ನು ಕಂಡಿದ್ದನು ಹಾಗೂ ಈ ಕುರಿತು ಗಡಿ ಭದ್ರತಾ ಪಡೆಗೆ ಮಾಹಿತಿ ನೀಡಿದ್ದನು. ಮೃತ ದೇಹಗಳೊಂದಿಗೆ ಪತ್ತೆಯಾಗಿರುವ ಮತದಾರರ ಗುರುತಿನ ಚೀಟಿಗಳು ಈ ಇಬ್ಬರು ದಂಪತಿಗಳು ಪಾಕಿಸ್ತಾನದ ಸಿಂಧ್ ಜಿಲ್ಲೆಯ ನಿವಾಸಿಗಳು ಎಂಬುದನ್ನು ದೃಢಪಡಿಸಿವೆ.
ಮೃತ ದಂಪತಿಗಳನ್ನು 17 ವರ್ಷದ ರವಿಕುಮಾರ್ ಹಾಗೂ 15 ವರ್ಷದ ಶಾಂತಿ ಬಾಯಿ ಎಂದು ಗುರುತಿಸಲಾಗಿದ್ದು, ಅವರ ಬಳಿ ಪಾಕಿಸ್ತಾನ ಮೂಲದ ಒಂದು ಮೊಬೈಲ್ ಸಿಮ್ ಕಾರ್ಡ್ ಕೂಡಾ ಪತ್ತೆಯಾಗಿದೆ.
ಮೃತ ಯುವಕನ ಬಾಯಿಯ ಬಳಿ ನೀರಿನ ಕ್ಯಾನ್ ಕೂಡಾ ಪತ್ತೆಯಾಗಿದ್ದು, ದಂಪತಿಗಳು ನೀರಿನೊಂದಿಗೆ ಪ್ರಯಾಣಿಸಿದ್ದು, ಅದು ಖಾಲಿಯಾಗಿರಬಹುದು ಎಂಬುದರತ್ತ ಇದು ಬೊಟ್ಟು ಮಾಡುತ್ತಿದೆ. ಕಪ್ಪಾಗಿರುವ ಮೃತ ದೇಹಗಳು ನಿರ್ಜಲೀಕರಣದಿಂದ ಮೃತಪಟ್ಟಿರಬಹುದು ಎಂಬುದನ್ನು ಸೂಚಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಮನೆಯಿಂದ ಪರಾರಿಯಾಗಿರುವ ದಂಪತಿಗಳು, ಅಕ್ರಮವಾಗಿ ಗಡಿ ದಾಟಲು ಪ್ರಯತ್ನಿಸಿದ್ದಾರೆ. ಆದರೆ, ಈ ಪ್ರಯತ್ನದಲ್ಲಿ ಅವರು ಮರಳುಗಾಡಿನಲ್ಲಿ ತಮ್ಮ ಜೀವ ಕಳೆದುಕೊಂಡಿದ್ದಾರೆ ಎಂದೂ ಅವು ಹೇಳಿವೆ.
ಸಾಮಾನ್ಯವಾಗಿ ನವವಿವಾಹಿತೆಯರು ಧರಿಸುವ ಕೆಂಪು ಹಾಗೂ ಬಿಳಿ ಬಳೆಗಳನ್ನು ಮೃತ ಮಹಿಳೆ ಧರಿಸಿರುವುದೂ ಈ ವೇಳೆ ಕಂಡು ಬಂದಿದೆ.
ದಂಪತಿಗಳು ಭಾರತಕ್ಕೆ ಪ್ರಯಾಣಿಸಲು ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿಗುಂಟ ಉದ್ವಿಗ್ನತೆ ತೀವ್ರಗೊಂಡಿದ್ದರಿಂದ, ಅವರ ವೀಸಾ ಅರ್ಜಿ ನೆನೆಗುದಿಗೆ ಬಿದ್ದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತನಿಖೆಯ ಭಾಗವಾಗಿ ಈ ಎರಡೂ ಮೃತ ದೇಹಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತದೆ.







