ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, 12 ಮಂದಿ ಮೃತ್ಯು

PC: PTI
ಜೈಪುರ: ರಾಜಸ್ಥಾನದಾದ್ಯಂತ ಸೋಮವಾರ ಸುರಿದ ಭಾರೀ ಮಳೆಯಿಂದ ಕೋಟಾ, ಪಾಲಿ, ಜಾಲೋರೆ ಹಾಗೂ ಧೋಲ್ಪುರ ಜಿಲ್ಲೆಗಳು ತೀವ್ರ ಪೀಡಿತವಾಗಿವೆ. ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ.
ಪಾಲಿಯಲ್ಲಿ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಶಾಲೆಗಳಿಗೆ ರಜೆ ಸಾರಲಾಗಿದೆ. ಪಾಲಿ ನಗರದ ರಾಮ್ ದೇವ್ ರಸ್ತೆ, ಸಿಂಧಿ ಕಾಲನಿ, ಜೈನಗರ, ಶೇಖಾವತ್ ನಗರ್, ಗಾಂಧಿ ನಗರ್ ಹಾಗೂ ನ್ಯೂ ಪ್ರತಾಪ್ ನಗರಗಳು ಜಲಾವೃತವಾಗಿವೆ.
ಜಾಲೂರು ಹಾಗೂ ಜೋಧಪುರದ ಮರ್ವಾರ್ ಜಂಕ್ಷನ್ ಹಾಗೂ ಲುನಿ ನಡುವಿನ ಕೆಲವು ರೈಲು ಮಾರ್ಗಗಳು ಜಲಾವೃತವಾಗಿದ್ದು, ರೈಲುಗಳ ವೇಳಾ ಪಟ್ಟಿಯನ್ನು ಬದಲಾಯಿಸಲಾಗಿತ್ತು. ಪಾಲಿ ಹಾಗೂ ಮರ್ವಾರ್ ಜಂಕ್ಷನ್ ನಡುವಿನ ಮಾರ್ಗದಲ್ಲಿ ಕೂಡ ರೈಲು ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಕೋಟಾ ಅಣೆಕಟ್ಟಿನಿಂದ 2 ಲಕ್ಷ ಕ್ಯೂಸೆಕ್ಗಳಿಗೂ ಅಧಿಕ ನೀರು ಬಿಡುಗಡೆ ಮಾಡಿದ ಬಳಿಕ ಚಂಬಲ್ ನದಿ ಉಕ್ಕಿ ಹರಿದ ಪರಿಣಾಮ ಹಲವು ಕಾಲನಿಗಳು ಜಲಾವೃತವಾದವು. ಇದರಿಂದ ಸುಮಾರು 10 ಸಾವಿರ ನಿವಾಸಿಗಳು ತಮ್ಮ ಮನೆಯಲ್ಲಿ ಸಿಲುಕಿಕೊಂಡಿದ್ದಾರೆ.
ಚಂಬಲ್ ನದಿಗೆ ಮೀನು ಹಿಡಿಯಲು ಹೋಗಿದ್ದ 7 ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಓರ್ವನನ್ನು ರಕ್ಷಿಸಲಾಗಿದೆ.
ಅನಂತಪುರ, ರಣ್ಪುರ, ದೇವ್ಲಿ ಆರಬ್ ಹಾಗೂ ಕೋಟಿಲ್ಯಾ ನಗರದಲ್ಲಿ ರಕ್ಷಣಾ ಕಾರ್ಯಾಚರಣೆಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ನಿಯೋಜಿಸಲಾಗಿದೆ. ಜಲಾವೃತವಾದ ಈ ಕಾಲನಿಗಳಿಂದ 150ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಇತರ ನೆರೆ ಸಂತ್ರಸ್ತ ಜಿಲ್ಲೆಗಳಲ್ಲಿ ಕೂಡ ಎಸ್ ಡಿ ಆರ್ ಎಫ್ ತಂಡವನ್ನು ನಿಯೋಜಿಸಲಾಗಿದೆ.







